ಕಮ್ಮರಡಿಯಲ್ಲಿ ಆಯೋಜಿಸಿದ್ದ ಪಟ್ಲ ಟ್ರಸ್ಟಿನ ಕಮ್ಮರಡಿ ಘಟಕದ ವಾರ್ಷಿಕೋತ್ಸವದ ಸಭೆಯಲ್ಲಿ ಸಾಧಕರನ್ನು ಗೌರವಿಸಲಾಯ್ತು. ಪಟ್ಲ ಸತೀಶ್ ಶೆಟ್ಟಿ, ಸತೀಶ್ ರೈ, ಶೇಷಾದ್ರಿ ಭಟ್, ರಾಜಶೇಖರ ಭಟ್ ಇದ್ದರು.
ತೀರ್ಥಹಳ್ಳಿ: ಯಕ್ಷಧ್ರುವ ಪಟ್ಲ ಟ್ರಸ್ಟಿನ ಕಮ್ಮರಡಿ ಘಟಕದ 4ನೇ ವಾರ್ಷಿಕೋತ್ಸವ ಸೋಮವಾರ ಕಮ್ಮರಡಿ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.
ಆಯುರ್ವೇದ ವೈದ್ಯರಾಗಿ ನಾಲ್ಕು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡಾ. ಕೆ.ವಿ.ಸುಬ್ರಹ್ಮಣ್ಯ ಮತ್ತು ಮರ ಮತ್ತು ಕಬ್ಬಿಣದ ಕೆಲಸದ ಮೂಲಕ ಸಮಾಜದ ಅಗತ್ಯಗಳಿಗೆ ಪೂರಕವಾಗಿ ನೆರವಾಗುತ್ತಿರುವ ವಾದಿರಾಜಾಚಾರ್ಯ ಅವರುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಗೌರವಿಸಲಾಯಿತು.
ಹಿರಿಯರನ್ನು ಗೌರವಿಸಿ ಮಾತನಾಡಿದ ಯಕ್ಷಧ್ರುವ ಪಟ್ಲ ೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ, ನಮ್ಮ ಟ್ರಸ್ಟ್ ನೂರಾರು ಕಲಾವಿದರ ಬದುಕಿನಲ್ಲಿ ಭರವಸೆ ಮೂಡಿಸಿದೆ. ಟ್ರಸ್ಟಿನ ಕಮ್ಮರಡಿ ಘಟಕ ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಟ್ರಸ್ಟಿನ ಕಮ್ಮರಡಿ ಘಟಕದ ಅಧ್ಯಕ್ಷ ಸತೀಶ್ ರೈ ಮಾತನಾಡಿ, ನಡೆಯುತ್ತಿರುವ ಸೇವಾ ಕಾರ್ಯಗಳಿಗೆ ಮುಖ್ಯ ಪ್ರೇರಣೆ, ಮಾರ್ಗದರ್ಶನ, ಟ್ರಸ್ಟ್ ಮೂಲಕ ನೂರಾರು ಕಲಾವಿದರ ಬದುಕಿಗೆ ಬೆಳಕಾಗಿರುವ ಪಟ್ಲ ಸತೀಶ್ ಶೆಟ್ಟಿ ಅವರು. ಯಕ್ಷಗಾನ ಕಲಾವಿದರು ಮಾತ್ರವಲ್ಲದೆ ಜಾನಪದ ಕಲಾವಿದರು, ಕಂಬಳದಲ್ಲಿ ಕೋಣ ಓಡಿಸುವವರು, ದೈವ ಪಾತ್ರಿಗಳ ಬದುಕಿಗೂ ನೆರವಾಗುತ್ತಿದ್ದಾರೆ. ಈವರೆಗೆ ಸುಮಾರು 18 ಕೋಟಿ ರೂ.ಗೂ ಹೆಚ್ಚು ಅಣವನ್ನು ಆರೋಗ್ಯ, ಶಿಕ್ಷಣಕ್ಕೆ ವ್ಯಯ ಮಾಡಿದದಾರೆ. ಸುಮಾರು 45 ಮಂದಿ ನಿರಾಶ್ರಿತ ಕಲಾವಿದರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ‘ಗುಣಸುಂದರಿ ಪಾಪಣ್ಣ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.