ಸಾಗರದಲ್ಲಿ ‘ಮುಕುಟಮಣಿ ಚೂಡಾಮಣಿ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಅಶ್ವಿನಿಕುಮಾರ್, ಪ್ರಫುಲ್ಲಾ ಮಧುಕರ್, ಡಾ. ವೆಂಕಟೇಶ ಜೋಯಿಸ್, ನಂದಾ ಗೊಜನೂರು ಇತರರಿದ್ದರು. 
ಶಿವಮೊಗ್ಗ

ಕಲೆಗೆ ಲಿಂಗ, ಧರ್ಮ ತಾರತಮ್ಯ ಇಲ್ಲ | book release

ಸಾಗರ: ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಯಾಗಿ ನೋಡುವ ಸಂಸ್ಕೃತಿ ಇಂದಿಗೂ ದೂರವಾಗಿಲ್ಲ. ಮಹಿಳೆಯರು ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವ ದಿನಗಳಲ್ಲಿ ಚೂಡಾಮಣಿ ರಾಮಚಂದ್ರ ಡೊಳ್ಳು ಕುಣಿತವನ್ನು ಮಹಿಳೆಯರೂ ಕಲಿತು ವೇದಿಕೆ ಮೇಲೆ ಪ್ರದರ್ಶನ ನೀಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಹೇಳಿದರು.
ಸಾಗರದ ಭಾರತೀತೀರ್ಥ ಸಭಾಭವನದಲ್ಲಿ ಜೋಷಿ ಫೌಂಡೇಶನ್, ಕೆಳದಿ ರಿಸರ್ಚ್ ಫೌಂಡೇಶನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೊಳ್ಳು ಕಲಾವಿದೆ ಚೂಡಾಮಣಿ ರಾಮಚಂದ್ರ ಕುರಿತ ‘ಮುಕುಟಮಣಿ ಚೂಡಾಮಣಿ’ ಅಭಿನಂದನಾ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
 ಕಲೆಗೆ ಜಾತಿ, ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲ ಎಂಬುದನ್ನು ಚೂಡಾಮಣಿ ತೋರಿಸಿಕೊಟ್ಟಿದ್ದಾರೆ. ಅವರ ಸುದೀರ್ಘ ಸೇವೆಯನ್ನು ದಾಖಲಿಸುವ ಅಭಿನಂದನಾ ಗ್ರಂಥ ಅರ್ಥಪೂರ್ಣವಾದುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಗರ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಗಂಡು ಕಲೆ ಡೊಳ್ಳು ಕುಣಿತವನ್ನು 33 ದೇಶಗಳಲ್ಲಿ ಪ್ರದರ್ಶಿಸಿದ ಹೆಗ್ಗಳಿಕೆ ಚೂಡಾಮಣಿ ರಾಮಚಂದ್ರ ಅವರದು. ಇಳಿ ವಯಸ್ಸಿನಲ್ಲೂ ಉತ್ಸಾಹ ಕಳೆದುಕೊಳ್ಳದೆ ಕಲಾ ಸೇವೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ. ಚೂಡಾಮಣಿ ರಾಮಚಂದ್ರ ಅವರು ಎಲ್ಲರ ಪ್ರೀತಿಗೂ ಪಾತ್ರವಾದವರು. ಇವರ ಸಾಧನೆಗೆ ಪತಿ ಸೇರಿ ಕುಟುಂಬದ ಎಲ್ಲರ ಸಹಕಾರವೂ ಇದೆ ಎಂದರು.
ಕೃತಿ ಕುರಿತು ಡಾ. ಕೆಳದಿ ವೆಂಕಟೇಶ್ ಜೋಯಿಸ್ ಮಾತನಾಡಿದರು. ನಂದ ಗೊಜನೂರು, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಸುನಂದಾ ಶಶಿಭೂಷಣ್, ಗಿರಿಜಾ ರಾಮಚಂದ್ರ, ಪತ್ರಕರ್ತರ ದೀಪಕ್ ಸಾಗರ್, ಮ.ಸ.ನಂಜುಂಡಸ್ವಾಮಿ , ಜ್ಯೋತಿ ಮಣೂರು  ಇತರರಿದ್ದರು.