ಶಿವಮೊಗ್ಗದ ಸೈಬರ್ ಠಾಣೆ 
ಶಿವಮೊಗ್ಗ

ಸೈಬರ್ ವಂಚನೆಗೆ ನೆರವಾಗುತ್ತಿದ್ದ ಇಬ್ಬರ ಬಂಧನ । Cyber ​​fraud

ಪ್ರಮುಖ ಮುಖ್ಯಾಂಶಗಳು

  • ಹದಿನೈದು ವರ್ಷಗಳ ಸ್ನೇಹವನ್ನೇ ಬಳಸಿಕೊಂಡು ವಂಚನೆಗೆ ನೆರವು
  • ಸೀಗೆಹಟ್ಟಿಯ ಸುಧೀಂದ್ರನಾಥ್, ಬಾಪೂಜಿನಗರದ ಆರೀಫ್ ಷರೀಫ್ ಬಂಧಿತರು
  • ವ್ಯವಹಾರದ ನೆಪ ಹೇಳಿ ಶೇಷಾದ್ರಿಪುರಂನ ಸತೀಶ್ ಅವರನ್ನು ನಂಬಿಸಿದ್ದ ಆರೋಪಿಗಳು
ಶಿವಮೊಗ್ಗ: ಹದಿನೈದು ವರ್ಷಗಳ ಸ್ನೇಹವನ್ನೇ ಬಳಸಿಕೊಂಡು ಬ್ಯಾಂಕ್ ಖಾತೆ ಮೂಲಕ ಕೋಟ್ಯಂತರ ರೂ. ಸೈಬರ್ ವಂಚನೆ(Cyber ​​fraud)ಗೆ ನೆರವಾಗುತ್ತಿದ್ದ ಇಬ್ಬರನ್ನು ಶಿವಮೊಗ್ಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಸೀಗೆಹಟ್ಟಿಯ ಸುಧೀಂದ್ರನಾಥ್ ಮತ್ತು ಬಾಪೂಜಿನಗರದ ಜ್ಯೂಸ್ ವ್ಯಾಪಾರಿ(Juice merchant) ಆರೀಫ್ ಷರೀಫ್ ಬಂಧಿತರು. ನಗರದ ಶೇಷಾದ್ರಿಪುರಂನ ಸತೀಶ್ ಎಂಬುವರು ಸೋಮವಾರ(ಫೆ.16) ಸೈಬರ್ ಠಾಣೆ(Cyber station) ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಹಳೆಯ ಸ್ನೇಹಿತ ಸುಧೀಂದ್ರನಾಥ್ ವ್ಯವಹಾರದ ನೆಪ ಹೇಳಿ ಬ್ಯಾಂಕ್ ವಿವರ(Bank details)ಗಳನ್ನು ಪಡೆದು ವಂಚಿಸಿದ್ದಾನೆ ಎಂದು ದೂರಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ.
ಸತೀಶ್ ಅವರನ್ನು ನಂಬಿಸಿದ್ದ ಆರೋಪಿಗಳು ಅವರ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್(Atm card) ಮತ್ತು ಮೊಬೈಲ್ ನಂಬರ್ ಪಡೆದು ಅದನ್ನು ಮ್ಯೂಲ್ ಅಕೌಂಟ್ ಆಗಿ ಪರಿವರ್ತಿಸಿದ್ದರು. ಈ ಖಾತೆಯ ಮೂಲಕ ಸೈಬರ್ ವಂಚಕರು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು. ಸತೀಶ್ ಅವರ ಖಾತೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಾಗ ಈ ಜಾಲ ಬಯಲಾಗಿದೆ.
ಸತೀಶ್ ಅವರ ಈ ಒಂದು ಖಾತೆಯ ಮೇಲೆ ಕರ್ನಾಟಕ ಸೇರಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು 2.12 ಕೋಟಿ ರೂ. ವಂಚನೆಯಾಗಿದ್ದು, ಅದರಲ್ಲಿ 22.61 ಲಕ್ಷ ರೂ. ಇದೇ ಮ್ಯೂಲ್ ಅಕೌಂಟ್ ಮೂಲಕ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಪೊಲೀಸರು ಆರೋಪಿಗಳಿಂದ ಮೊಬೈಲ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.