ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ ನೀಗಿಸುವಂತೆ ಒತ್ತಾಯಿಸಿ ನಾಗರೀಕ ವೇದಿಕೆ ಪ್ರಮುಖರು ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಎಂ.ರಾಜಶೇಖರ್, ಮಂಜಪ್ಪ, ಅಣ್ಣಪ್ಪ, ಕೃಷ್ಣಮೂರ್ತಿ ಇತರರಿದ್ದರು.
ಸಾಗರ: ಸಾಗರ ಉಪವಿಭಾಗೀಯ ಆಸ್ಪತ್ರೆಗೆ ವೈದ್ಯರ ನೇಮಕ, ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ನಾಗರಿಕ ವೇದಿಕೆ ಪ್ರಮುಖರು ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ವೈದ್ಯ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಶಾಸಕರು ಪ್ರತಿ ಸಭೆಯಲ್ಲೂ ವೈದ್ಯಸಿಬ್ಬಂದಿ ನೇಮಕ, ಆಸ್ಪತ್ರೆಗೆ ಅನುದಾನ ಬರುತ್ತಿದೆ ಎಂದು ಹೇಳುತ್ತಿದ್ದಾರೆಯೇ ವಿನಃ ಅದ್ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಆಸ್ಪತ್ರೆಗೆ ಸಿ.ಟಿ. ಸ್ಕಾೃನಿಂಗ್, ಯುಎಸ್‌ಬಿ ಸ್ಕಾೃನಿಂಗ್ ಸೌಲಭ್ಯ ಖರೀದಿಸಿದರೆ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಎಕ್ಟ್-ರೇ ಯಂತ್ರಗಳು ಹಳೆಯದಾಗಿದ್ದು, ನಿಖರ ವರದಿ ಬರುತ್ತಿಲ್ಲ. ಹೊಸ ತಂತ್ರಜ್ಞಾನದ ಯಂತ್ರಗಳನ್ನು ಅಳಡಿಸಬೇಕು ಎಂದು ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ದಂತ ವೈದ್ಯರು, ಚರ್ಮರೋಗ ತಜ್ಞರು ಸೇರಿ ಹಲವು ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿದೆ. ಗ್ರೂಪ್ ಡಿ, ನರ್ಸ್‌ಗಳ ಸಂಖ್ಯೆಯೂ ಕಡಿಮೆಯಿದೆ. ರೋಗಿಗಳ ಸಂಬಂಧಿಕರೇ ಸ್ಟ್ರೆಚರ್, ವ್ಹೀಲ್‌ಚೇರ್ ತಳ್ಳಿಕೊಂಡು ಹೋಗುವ ಸ್ಥಿತಿ ಇದೆ. ಗ್ರೂಪ್ ಡಿ ನೌಕರರ ಕೊರತೆ ಇದ್ದರೂ ಕೆಲವರನ್ನು ಬೇರೆಬೇರೆ ಕಡೆಗೆ ನಿಯೋಜನೆ ಮಾಡಲಾಗುತ್ತಿದೆ ಎಂದು ದೂರಿದರು.
ಆಸ್ಪತ್ರೆಗೆ ಅಗತ್ಯ ಔಷಧ, ಯಂತ್ರೋಪಕರಣ ಖರೀದಿಸಬೇಕು. ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಂದ ಆಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಎಂ.ರಾಜಶೇಖರ್, ಮಂಜಪ್ಪ, ರವಿ, ಸತೀಶ್ ಗೌಡ, ಲೋಕೇಶ್, ಸುರೇಶ್, ಅಣ್ಣಪ್ಪ, ಕೃಷ್ಣಮೂರ್ತಿ, ಉಮೇಶ್, ಶೇಖರ, ಸುರೇಶ್ ಇತರರಿದ್ದರು.