ಸಾಗರ ನಗರಸಭೆ ಆಡಳಿತ ವೈಖರಿ ಖಂಡಿಸಿ ನಗರಸಭೆ ಬಳಿ ವಿಜೆಪಿ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗಣೇಶ್‌ಪ್ರಸಾದ್, ಶ್ರೀನಿವಾಸ್, ಡಾ. ರಾಜನಂದಿನಿ ಕಾಗೋಡು, ಕೃಷ್ಣ ಶೇಟ್ ಇತರರಿದ್ದರು.
ಸಾಗರ: ನಗರಸಭೆ ಆಡಳಿತದಲ್ಲಿ ಪರಿಶಿಷ್ಟರನ್ನು ನಿರ್ಲಕ್ಷಿಸಲಾಗಿದೆ. ಮೀಸಲಾಗಿದ್ದ ಅನುದಾನವೂ ಬಳಕೆಯಾಗಿಲ್ಲ. ಜನರು ಇ-ಸ್ವತ್ತು ಸಿಗದೆ ಜನರು ಪರದಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಪ್ರಮುಖರು ನಗರಸಭೆ ಎದುರಿನ ಅಂಬೇಡ್ಕರ್ ಪುತ್ಥಳಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಾತೆತ್ತಿದ್ದರೆ ಅಹಿಂದ ಎನ್ನುವ ಕಾಂಗ್ರೆಸ್ ಪಕ್ಷ ಮತ್ತು ಸ್ಥಳೀಯ ಶಾಸಕರು ಕಳೆದ ಮೂರು ವರ್ಷದಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾಗಿರಿಸಿದ್ದ ಅನುದಾನದಲ್ಲಿ ನಯಾಪೈಸೆಯನ್ನೂ ಖರ್ಚು ಮಾಡಿಲ್ಲ. ಫಲಾನುಭವಿಗಳ ಆಯ್ಕೆ ನಡೆದಿದೆ. ಆದರೆ ಅರ್ಹರನ್ನು ಗುರುತಿಸಿ ಅವರಿಗೆ ಸೌಲಭ್ಯ ಕಲ್ಪಿಸುವಲ್ಲಿ ಶಾಸಕರು ವಿಫಲವಾಗಿದ್ದಾರೆ. ಸವಲತ್ತು ಕೊಡಲು ಇರುವ ಸಮಸ್ಯೆ ಏನು ಎಂಬುದನ್ನು ಶಾಸಕರು ತಿಳಿಸಬೇಕು. ಶೇ.24.10 ಅನುದಾನ ಬಳಸಿಕೊಳ್ಳಲು ಅವಕಾಶವಿದ್ದರೂ ನಿರ್ಲಕ್ಷೃ ತೋರಿದ್ದಾರೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶ್‌ಪ್ರಸಾದ್ ದೂರಿದರು.
ಶಾಸಕರು ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾರೆ. ಆದರೆ ಒಬ್ಬರ ವಿರುದ್ದವೂ ಕ್ರಮ ತೆಗೆದುಕೊಂಡಿಲ್ಲ. ಇ-ಸ್ವತ್ತು ಸಿಗದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹರತಾಳು ಹಾಲಪ್ಪ ಶಾಸಕರಾಗಿದ್ದ ಸಂದರ್ಭ ವಿವಿಧ ಸಮಾಜದ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿಸಿದ್ದರು. ಆದರೆ ಈಗಿನ ಸರ್ಕಾರ ಮತ್ತು ಶಾಸಕರು ಬಿಡಿಗಾಸನ್ನೂ ನೀಡಿಲ್ಲ. ಶಾಸಕರು, ಅವರ ಹಿಂಬಾಲಕರನ್ನು ಓಲೈಸುವಲ್ಲಿ ನಗರಸಭೆ ಅಧಿಕಾರಿಗಳು ಸಮಯ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ಮಾಜಿ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ಜನರ ಸಮಸ್ಯೆ ಹೇಳಲು ಫೋನ್ ಮಾಡಿದರೆ ಪೌರಾಯುಕ್ತರು ಕರೆ ಸ್ವೀಕರಿಸುತ್ತಿಲ್ಲ. ಜನಸಾಮಾನ್ಯರಿಗೆ ನಗರಸಭೆಯಿಂದ ಕನಿಷ್ಠ ಸೌಲಭ್ಯವೂ ಸಿಗುತ್ತಿಲ್ಲ. ಪಟ್ಟಣದ 17 ಮತ್ತು 18ನೇ ವಾರ್ಡ್‌ನಲ್ಲಿ ಮಾತ್ರ ವಿಶೇಷ ಆದ್ಯತೆ ನೀಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು
ಮಧುರಾ ಶಿವಾನಂದ್, ಡಾ. ರಾಜನಂದಿನಿ ಕಾಗೋಡು, ಕೃಷ್ಣ ಶೇಟ್, ಜಗನ್ನಾಥ ಶೇಟ್, ಮಹೇಶ್, ಸಂತೋಷ್, ಸವಿತಾ ವಾಸು, ವಿನೋದರಾಜ್, ಪ್ರೇಮ ಸಿಂಗ್, ಶ್ವೇತಾ. ಶಿವಶಂಕರ್, ಪ್ರದೀಪ್ ಇತರರಿದ್ದರು.