ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಪರ್ಕ ಸಭೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು. ರತ್ನಾಕರ ಹೊನಗೋಡು, ದೇವೇಂದ್ರಪ್ಪ, ಮಧುರಾ ಇತರರಿದ್ದರು. 
ಶಿವಮೊಗ್ಗ

ಆನಂದಪುರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ | BJP public meeting

ಆನಂದಪುರ: ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಅತ್ಯಧಿಕ ಮೂಲ ಸೌಕರ್ಯ ನೀಡಿದ್ದ ತೃಪ್ತಿ ಇದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಯಡೇಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಗ್ರಾಮಗಳಲ್ಲಿ ಸಂಪರ್ಕ ಸೇತುವೆ ಹಾಗೂ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದರು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಾಧನೆಗಳು ಹಾಗೂ ನಾಯಕರು ನೀಡಿರುವ ಅಭಿವೃದ್ಧಿ ಕೊಡುಗೆಗಳನ್ನು  ಜನಸಂಪರ್ಕ ಸಭೆಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶ. ಆನಂದಪುರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಸಂಸದರೊಂದಿಗೆ ಚರ್ಚೆ ನಡೆಸಲಾಗಿದೆ. ಬೇಡಿಕೆ ಶೀಘ್ರದಲ್ಲೇ ಈಡೇರುವ ವಿಶ್ವಾಸವಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಅನುಭವ ಹಾಗೂ ವಯಸ್ಸಿನ ದೃಷ್ಟಿಯಿಂದಲೂ ಈಗಿನ ಶಾಸಕರಿಗೆ ಇನ್ನೂ ರಾಜಕೀಯ ಪ್ರಬುದ್ಧತೆ ಬಂದಿಲ್ಲ. ಹರತಾಳು ಹಾಲಪ್ಪ  ಶಾಸಕರಾಗಿದ್ದ ಅವಧಿಯಲ್ಲಿ ತಂದ ಅನುದಾನದ ಕಾಮಗಾರಿಗಳಿಗೆ ಈಗಿನ ಶಾಸಕರು ತಮ್ಮ ಹೆಸರಿನ ಲಕ ಅಳವಡಿಸಿ, ಮತ್ತೆ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ. ಹಿರೇಹರಕದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಗುದ್ದಲಿ ಪೂಜೆ ನಡೆಸಿದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ, ಸುವರ್ಣಾ, ಸುಮಾ, ಬಿ.ಸಿ.ಲಕ್ಷ್ಮಣ್ ಶಾಂತಪ್ಪ ಗೌಡ, ಭರ್ಮಪ್ಪ, ದೇವರಾಜ್, ಪ್ರಶಾಂತ್, ಶ್ರೀಧರ್, ಹರೀಶ್, ಜ್ಯೋತಿ ರಘು ಇತರರಿದ್ದರು.