ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಚ್.ಚಂದ್ರಭೂಪಾಲ ಪ್ರಗತಿ ಪರಿಶೀಲನೆ ನಡೆಸಿದರು. ಸುಜಾತಾ ಸಭೆಯಲ್ಲಿ ಉಪಸ್ಥಿತರಿದ್ದರು. 
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ 9,247 ಮೃತರ ಅಕೌಂಟ್‌ಗೆ ಹಣ ಸಂದಾಯ I amount paid

ಪ್ರಮುಖ ಮುಖ್ಯಾಂಶಗಳು

  • ನಿಧನರಾದವರ ಖಾತೆಗೆ ಗೃಹಲಕ್ಷ್ಮಿ ಜಮಾ
  • ಗೃಹಜ್ಯೋತಿ ವಿದ್ಯುತ್ ವಾಣಿಜ್ಯ ಉದ್ದೇಶಕ್ಕೆ ಬಳಕೆ
  • ಸಿ.ಎಸ್.ಚಂದ್ರಭೂಪಾಲ ಮಾಹಿತಿ
ಶಿವಮೊಗ್ಗ: ಗೃಹಲಕ್ಷ್ಮಿ (gruhalakshmi) ಮತ್ತು ಗೃಹಜ್ಯೋತಿ (gruhajyothi) ಯೋಜನೆಯಡಿ ಸೌಲಭ್ಯ ಪಡೆಯಲು ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ಹಾಗೂ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ರಾಜ್ಯ ಸರ್ಕಾರ (goverment) ಮುಂದಾಗಿರುವುದು ಸಮಯೋಚಿತ. ಇದರಿಂದ ಅನರ್ಹರು ಯೋಜನೆಯ ಲಾಭ ಪಡೆಯುವುದನ್ನು ತಪ್ಪಿಸಬಹುದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.
ಮಂಗಳವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾದವರ ಪೈಕಿ 9,247 ಮಂದಿ ನಿಧನರಾಗಿದ್ದರೂ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದು, ಅದನ್ನು ಮೃತರ ಕುಟುಂಬದವರು ಬಳಸಿಕೊಂಡಿರುವುದು ಪತ್ತೆಯಾಗಿದೆ ಎಂದರು.
ಒಂದೇ ಮನೆಯಲ್ಲಿ ಇಬ್ಬರು ಅಥವಾ ಮೂವರು ಮಹಿಳೆಯರು ಯಜಮಾನಿಯರಾಗಿ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ. ಇಂತಹ ಪ್ರಕರಣಗಳನ್ನು ಪರಿಗಣಿಸಿ ಫಲಾನುಭವಿಗಳ ಪಟ್ಟಿ ಪರಿಷ್ಕರಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಗೃಹಬಳಕೆಗಾಗಿ ನೀಡಲಾಗುವ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು, ಕೆಲವರು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಕಂಡುಬಂದಿದೆ. ಒಬ್ಬರ ಹೆಸರಲ್ಲೇ ಒಂದಕ್ಕಿಂತ ಹೆಚ್ಚು ಮೀಟರ್‌ಗಳಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಾಡಿಗೆ ಮನೆಗಳಲ್ಲಿ ನಿಜವಾದ ಫಲಾನುಭವಿಗಳಿದ್ದಾರೆಯೇ ಅಥವಾ ಬೇರೆಯವರಿದ್ದಾರೆಯೇ ಎಂದು ಸೂಕ್ತ ತನಿಖೆ ನಡೆಸಿ ಸರಿಪಡಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರದ ಉಪಾಧ್ಯಕ್ಷರಾದ ಶಿವಣ್ಣ, ಎಂ.ಎಸ್.ಬಸವರಾಜಪ್ಪ, ಅಫ್ತಾಬ್ ಪರ್ವೇಜ್, ರಮೇಶ್, ಸದಸ್ಯರಾದ ಅಮೀರ್ ಹಮ್ಜಾ, ಪ್ರಭಾಕರ್, ಭವ್ಯಾ ಕೃಷ್ಣಮೂರ್ತಿ, ರಾಹುಲ್, ಅರ್ಚನಾ, ನವುಲೇಶ್, ಶಿವಾನಂದ, ಉದಯಕುಮಾರ್, ಎಚ್.ಎಂ.ಮಧು, ಚಿದಂಬರ, ಜಯಶೀಲಪ್ಪ ಗೌಡ, ಜಯಂತ್, ನಾಗನಗೌಡ, ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಆಹಾರ ಇಲಾಖೆ ಉಪ ನಿರ್ದೇಶಕ ಸತೀಶ್ ಇತರರಿದ್ದರು.
ಸ್ಮಾರ್ಟ್ ಕಾರ್ಡ್ ವಿತರಣೆ
ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆಯುವ ಮಹಿಳೆಯರಿಗೆ ಶೀಘ್ರವೇ ಸ್ಮಾರ್ಟ್ ಕಾರ್ಡ್ ವಿತರಿಸಲು ತೀರ್ಮಾನಿಸಲಾಗಿದೆ. ಮತದಾನದ ಹಕ್ಕು ಇಲ್ಲದವರನ್ನು ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ಹೊರಗಿಡಲಾಗುವುದು ಎಂದು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಎಲ್‌ಒ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಫಲಾನುಭವಿಗಳಿಗೆ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಸಮಿತಿಗಳಿಗೆ ಸೂಚಿಸಲಾಗಿದೆ ಎಂದು ಚಂದ್ರಭೂಪಾಲ ಹೇಳಿದರು.

ಹೊಸ ಬಸ್ ಅವಶ್ಯ

ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಬಸ್‌ಗಳ ಸೌಲಭ್ಯ ಒದಗಿಸಬೇಕೆಂದು ನಾಗನಗೌಡ ಸಭೆಯಲ್ಲಿ ಒತ್ತಾಯಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಮಟ್ಟದ ಸಭೆಗಳಿಗೆ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಗೈರಾಗುತ್ತಿದ್ದಾರೆ. ಸಾಗರದಿಂದ ಹೊಸನಗರಕ್ಕೆ ಸಂಜೆ 6.30ರ ನಂತರ ಸರ್ಕಾರಿ ಬಸ್ ಸೌಕರ್ಯವಿಲ್ಲ. ತೀರ್ಥಹಳ್ಳಿ ಗ್ರಾಮೀಣ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ತೀರ್ಥಹಳ್ಳಿ-ಬಸವಾನಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸುವಂತೆ ಕೆಲ ಸದಸ್ಯರು ಒತ್ತಾಯಿಸಿದರು.
ಫಲಾನುಭವಿಗಳ ವಿವರ
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,03,610 ಫಲಾನುಭವಿಗಳಿಗೆ 30,82,31,500 ರೂ. ಪಾವತಿಸಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಮಂಜುನಾಥ್ ಸಭೆಗೆ ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 3,88,559 ಫಲಾನುಭವಿಗಳಿಗೆ 311.48 ಕೋಟಿ ರೂ. ಪಾವತಿಸಲಾಗಿದೆ. ಈ ಯೋಜನೆಯಲ್ಲಿನ ಬದಲಾವಣೆ ಕುರಿತು ಸರ್ಕಾರದ ಯಾವುದೇ ಹೊಸ ಮಾರ್ಗಸೂಚಿಗಳು ಇನ್ನೂ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ್ ಗಮನಕ್ಕೆ ತಂದರು. ಶಕ್ತಿ ಯೋಜನೆಯಲ್ಲಿ ಇದುವರೆಗೆ 7,68,01,377(ಶೇ.65) ಮಹಿಳೆಯರು ಪ್ರಯಾಣಿಸಿದ್ದಾರೆ. ಇದಕ್ಕಾಗಿ ಸರ್ಕಾರ 5,527.41 ಕೋಟಿ ರೂ. ವೆಚ್ಚ ಮಾಡಿದೆ ಎಂದು ಕೆಎಸ್‌ಆರ್‌ಡಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಹೇಳಿದರು.

ಹಲವು ಸಮಸ್ಯೆಗಳ ಪ್ರತಿಧ್ವನಿ

ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಕೆಇಬಿ ವತಿಯಿಂದ ಎನ್‌ಒಸಿ ನೀಡಲು ಸಮಸ್ಯೆಗಳಿವೆ. ಇದನ್ನು ಅಧಿಕಾರಿಗಳು ತಮ್ಮ ಹಂತದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗತ ಕೇಬಲ್ ಅಳವಡಿಸುವಾಗ ರಸ್ತೆಯ ಟೈಲ್ಸ್ ಕಿತ್ತು ಹಾಕಲಾಗುತ್ತಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಗೃಹಜ್ಯೋತಿ ಯೋಜನೆಯ ದುರ್ಬಳಕೆ ಆಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಂದ ಅನಗತ್ಯವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೇಳುತ್ತಿರುವುದರಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ. ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇರದಿದ್ದರೂ ಪ್ರಮಾಣಪತ್ರ ಕೇಳುವ ಔಚಿತ್ಯವೇನು ಎಂದು ಪ್ರಶ್ನಿಸಿದರು. ಪಡಿತರ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ನಿವಾರಿಸುವುದು, ಪಡಿತರ ಚೀಟಿಯಲ್ಲಿ ತಂದೆ, ಮಕ್ಕಳ ಹೆಸರಿದ್ದು, ಮಕ್ಕಳು ದುಡಿಮೆ ಆರಂಭಿಸಿದ ಬಳಿಕ ಆ ಕಾರ್ಡ್ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಯಾಗಿರುವುದು ಅನೇಕರಿಗೆ ಸಮಸ್ಯೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.