ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡದಂತೆ ಒತ್ತಾಯಿಸಿ ವಿಎಚ್‌ಪಿ ಹಾಗೂ ಬಜರಂಗದಳದ ವಾಸುದೇವ್, ರಾಜೇಶ್ ಗೌಡ, ಪ್ರಭು, ಸುರೇಶ್‌ಬಾಬು, ಅರ್ಜುನ್ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
- ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಬೇಡ
- ಸರ್ಕಾರದ ಕ್ರಮಕ್ಕೆ ವಿಎಚ್‌ಪಿ, ಬಜರಂಗದಳ ವಿರೋಧ
- ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ: ಗೋಹತ್ಯೆ ನಿಷೇಧ ಕಾಯ್ದೆ (act) ತಿದ್ದುಪಡಿಗೆ ಮುಂದಾಗಿರುವ ರಾಜ್ಯ (state) ಸರ್ಕಾರದ ಕ್ರಮ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಪ್ರಮುಖರು ಸೋಮವಾರ ಜಿಲ್ಲಾಧಿಕಾರಿ ಕಚೇರಿ (office) ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ- 2020ರ ಪ್ರಾಸ್ತಾವಿಕ ತಿದ್ದುಪಡಿ ಮಸೂದೆ ಸಂವಿಧಾನದ ಆಶಯಕ್ಕೆ, ರಾಜ್ಯದ ಮತ್ತು ಹಿಂದು ಸಮಾಜದ ಹಿತಾಸಕ್ತಿಗೆ ವಿರೋಧಿ ಅಗಿರುವುದರಿಂದ ಅದನ್ನು ವಿಧಾನಸಭೆಯಲ್ಲಿ ಮಸೂದೆ ಮಂಡಿಸದಂತೆ ಒತ್ತಾಯಿಸಿದರು.
ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ -2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ತಿದ್ದುಪಡಿ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯಾದ್ಯಂತ ಪ್ರತಿಭಟನೆ (protest) ನಡೆಯುವ ಮೊದಲೇ ತಿದ್ದುಪಡಿ ನಿರ್ಧಾರ ಕೈಬಿಡಲಿ ಎಂದು ಆಗ್ರಹಿಸಿದರು.
ಗೋಸಾಗಣೆಗೆ ಅನುಕೂಲ
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಣೆ, ಹಣದಾಸೆಗಾಗಿ ಜಾನುವಾರುಗಳ ಮಾರಾಟ ಕಡಿಮೆಯಾಗಿತ್ತು. ಆದರೆ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಕಟುಕರಿಗೆ ಹಾಗೂ ಅಕ್ರಮ ಗೋಸಾಗಣೆ ಮಾಡುವವರಿಗೆ ಅನುಕೂಲವಾಗುತ್ತದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಕ್ರೂರ ರೀತಿಯಲ್ಲಿ ಜಾನುವಾರುಗಳನ್ನು ಸಾಗಣೆ ಮಾಡದಂತೆ ನಿಯಮಾವಳಿ ರೂಪಿಸಬೇಕು. ಈಗಿರುವ ಕಾನೂನನ್ನು ದುರ್ಬಲಗೊಳಿಸಬಾರದು. ಹಿಂದುಗಳಿಗೆ ಪೂಜ್ಯನೀಯವಾದ ಗೋವುಗಳಿಗೆ ನೋವು, ಹಿಂಸೆ ನೀಡಲು ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿಕೊಡಬಾರದು. ಇದು ಅಶಾಂತಿ, ಅರಾಜಕತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ವಾಸುದೇವ್, ಪ್ರಮುಖರಾದ ರಾಜೇಶ್ ಗೌಡ, ಅಂಕುಶ್, ಸುರೇಶ್‌ಬಾಬು, ಜಿತೇಂದ್ರ, ಪ್ರಭು, ಅರ್ಜುನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.