ಸಾಗರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ತೋಯಜಾಕ್ಷಿ, ಶಿವಾನಂದ್, ರವಿಕುಮಾರ್, ಮಧುರಾ ಇತರರಿದ್ದರು.
ಸಾಗರ: ಹನ್ನೆರಡನೇ ಶತಮಾನದಲ್ಲಿ ಅತ್ಯಂತ ನಿಖರವಾಗಿ ಸಾಮಾಜಿಕ ಬದಲಾವಣೆಯನ್ನು ವಚನಗಳ ಮೂಲಕ ಪ್ರತಿಪಾದಿಸಿದವರು ನಿಜಶರಣ ಅಂಬಿಗರ ಚೌಡಯ್ಯ ಪತ್ರಕರ್ತ ಬಿ.ಡಿ.ರವಿಕುಮಾರ್ ಹೇಳಿದರು.
ಸಾಗರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಚನಕಾರ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ತಾನು ಹೊಳೆಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ, ಜೀವನದಲ್ಲಿ ಬವಣೆಯಿಂದ ಬಳಲುವ ಜನರನ್ನು ವಚನಾಮೃತದ ಮೂಲಕ ಸಾಂತ್ವನಗೊಳಿಸುವ ಶರಣ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಮುನ್ನುಡಿ ಬರೆದವರು ಅಂಬಿಗರ ಚೌಡಯ್ಯ. ಇಷ್ಟ ದೈವದ ಬದಲಿಗೆ ತನ್ನದೇ ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿದ ಶರಣ ಎಂದರು.
ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ ಅಂಬಿಗರ ಚೌಡಯ್ಯ ಒಂದರ್ಥದಲ್ಲಿ ಬಂಡಾಯದ ಶರಣನಾಗಿಯೂ ನಮ್ಮ ಮುಂದೆ ನಿಲ್ಲುತ್ತಾರೆ. ಜಾತಿ ಭೇದ, ಅಸಮಾನತೆಯನ್ನು ತೀವ್ರವಾಗಿ ವಿರೋಧಿಸಿದ ಅವರ ವಚನಗಳಲ್ಲಿ ದೇವರು, ಭಕ್ತಿ, ಶ್ರಮ, ಕಾಯಕ, ಮಾನವೀಯ ಮೌಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಿದರು.
ಗಂಗಾಮತ ಸಮಾಜದ ಅಧ್ಯಕ್ಷ ಶಿವಾನಂದ್, ಉಪ ತಹಸೀಲ್ದಾರ್ ತೋಯಜಾಕ್ಷಿ, ರವಿ ಆಯನೂರು, ರವಿಕುಮಾರ್, ಭಾಸ್ಕರ್, ಮಧುರಾ ಶಿವಾನಂದ್, ವೆಂಕಟೇಶ್ ಚಂದಳ್ಳಿ, ಪರಿಮಳಾ, ಆನಂದ ಬಾಳೆಕೊಪ್ಪ, ಶಿವಾನಂದ ಗೇರುಬೀಸು, ದೇವರಾಜ್, ದಯಾನಂದ್, ವಿ.ಟಿ.ಸ್ವಾಮಿ ಇತರರಿದ್ದರು.