ಸೊರಬದ ಗುಂಜನೂರು ಗ್ರಾಮದ ಪೆದ್ದಯ್ಯ ಹಾಗೂ ಸಿದ್ದಯ್ಯ ಸ್ವಾಮಿಗಳ ಮಠದ ಹಾಗೂ ಚೌಡೇಶ್ವರಿ ದೇವಿ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುರೇಂದ್ರ ಗೌಡ, ಮಾಲತೇಶ ಗೌಡ ಇತರರಿದ್ದರು. 
ಶಿವಮೊಗ್ಗ

ದೇವರಲ್ಲಿ ಸದಾ ನಂಬಿಕೆ ಇರಲಿ

ಪ್ರಮುಖ ಮುಖ್ಯಾಂಶಗಳು

  • ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿಕೆ
ಸೊರಬ: ಪ್ರಕೃತಿ ಸಂಪತ್ತು, ಜೀವರಾಶಿಗಳನ್ನು ಸೃಷ್ಟಿಸುವ ಭಗವಂತ ನಮ್ಮೆಲ್ಲರ ರಕ್ಷಣೆ ಮಾಡುತ್ತಾನೆ. ಸದಾಕಾಲ ಭಗವತ್ ಜ್ಞಾನ ಹೊಂದಿರುವುದೇ ನಿಜವಾದ ಶ್ರದ್ಧೆ ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಂಜನೂರು ಗ್ರಾಮದ ಪೆದ್ದಯ್ಯ ಹಾಗೂ ಸಿದ್ದಯ್ಯ ಸ್ವಾಮಿ ಮಠದ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಎಷ್ಟೇ ಬುದ್ಧಿವಂತನಾದರೂ ಮಣ್ಣು, ಗಾಳಿ, ನೀರು ಸೃಷ್ಟಿಸಲು ಸಾಧ್ಯವಿಲ್ಲ. ದೇವರು ಎಲ್ಲದರ ಸೃಷ್ಟಿಕರ್ತ. ದೇವರಲ್ಲಿ ಸದಾ ನಂಬಿಕೆ ಹೊಂದಿರಬೇಕು ಎಂದು ತಿಳಿಸಿದರು.
ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೂ ಉಳಿಸಬೇಕು. ಅಮೂಲ್ಯ ಶರೀರವನ್ನು ದುಶ್ಚಟ ಮಾಡಿ ಕೆಡಿಸಿಕೊಳ್ಳಬಾರದು.ಆದರ್ಶ ಗ್ರಾಮ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.
ಉಭಯ ಸ್ವಾಮಿಗಳ ಹಾಗೂ ಶ್ರೀ ಚೌಡೇಶ್ವರಿ ಗದ್ದುಗೆಗೆ ಅಭಿಷೇಕಾದಿ ಅಷ್ಟೋತ್ತರ ಪೂಜೆಯು ಕೊಟ್ರೇಶ್ ಶಾಸ್ತ್ರಿ ಹಾಗೂ ಗಿರೀಶ್ ಶಾಸ್ತ್ರಿ ಅವರಿಂದ ನಡೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ಸುರೇಂದ್ರ ಗೌಡ, ಮಾಲತೇಶ್ ಗೌಡ,  ಸಂತೋಷ ಗೌಡ ಇತರರಿದ್ದರು.