ಶಿಕಾರಿಪುರದಲ್ಲಿ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ರಾಜು, ಬಂಗಾರಪ್ಪ, ಸುರೇಶ್, ಡಾ. ವೀರೇಂದ್ರ ಇತರರಿದ್ದರು. 
ಶಿವಮೊಗ್ಗ

ಶಿಕ್ಷಣದ ಜತೆ ಕ್ರೀಡೆಗೂ ಮಹತ್ವದ ಸ್ಥಾನ

ಶಿಕಾರಿಪುರ: ಯುವಜನರು ಶಿಕ್ಷಣದ ಜತೆ ಕ್ರೀಡಾಕೂಟಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ, ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ, ವಿವಿಧ ಶಿಕ್ಷಣ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ದೇಸಿ ಕ್ರೀಡೆಗಳು ವಿನಾಶದ ಅಂಚಿನಲ್ಲಿವೆ. ಕೆಲ ಕ್ರೀಡೆಗಳು ಜನಮಾನಸದಿಂದ ಮರೆಯಾಗಿವೆ. ಇನ್ನುಳಿದ ಕ್ರೀಡೆಗಳನ್ನು ನಾವು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ತಾಲೂಕಿನ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜತೆ ಕ್ರೀಡೆಗೂ ಮಹತ್ವದ ಸ್ಥಾನವಿದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ ಎಂದರು.
ಕ್ರೀಡೆಗಳು ಆರೋಗ್ಯದ ಮೂಲ. ನಾವು ಕ್ರೀಡಾಸಕ್ತರನ್ನು ಗುರುತಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಕ್ರೀಡೆಗಳ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಆಸಕ್ತಿ ಮೂಡಿಸಬೇಕು. ಸದೃಢ ದೇಹಕ್ಕೆ ಕ್ರೀಡೆ ಅವಶ್ಯ ಎಂದು ಹೇಳಿದರು.
ಬಿಇಒ ಲೋಕೇಶ್ವರಪ್ಪ ಮಾತನಾಡಿ, ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಜಿಲ್ಲೆ, ವಿಭಾಗಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ಕಾರ್ಯದರ್ಶಿ ಗೀತಾ ಚೆನ್ನಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಪ್ಪ, ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ರಾಜು, ಉಪಾಧ್ಯಕ್ಷ ಬಂಗಾರಪ್ಪ, ಶ್ರೀ ಚನ್ನಮಲ್ಲಿಕಾರ್ಜುನ ಪಿಯು ಕಾಲೇಜಿನ ಪ್ರಾಚಾರ್ಯ ಸುರೇಶ್, ಡಾ. ವೀರೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್, ಅಸ್ಲಾಂ, ಪುಟ್ಟಪ್ಪ, ಅಂಜನಪ್ಪ, ರಮೇಶ್, ಕೆ.ಎಚ್.ಪುಟ್ಟಪ್ಪ ಇತರರಿದ್ದರು.