ಸೊರಬ ಬಿಇಒ ಕಚೇರಿಯಲ್ಲಿ ಆಯೋಜಿಸಿದ್ದ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಬಿಇಒ ಆರ್.ಪುಷ್ಪಾ ಚಾಲನೆ ನೀಡಿದರು. ದಯಾನಂದ ಕಲ್ಲೇರ್, ಸಂಜೀವ್‌ಕುಮಾರ್ ಇತರರಿದ್ದರು.
ಸೊರಬ: ತಾಲೂಕಿನ ಎಲ್ಲ ಶಾಲೆಗಳಲ್ಲಿ ಜೂ.1ಕ್ಕೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಿದ್ದು, ಶಾಲಾ ಆರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಬಿಇಒ ಆರ್.ಪುಷ್ಪಾ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೂ.1ರಂದು ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸುವ ಜತೆಗೆ ಶಿಕ್ಷಕರು ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಮಕ್ಕಳ ದಾಖಲಾತಿ ಅಭಿಯಾನ ಹಾಗೂ ದ್ವಿಭಾಷಾ ಮಾಧ್ಯಮದ ಬಗ್ಗೆ ಜಾಗೃತಿ ಮೂಡಿಸುವರು ಎಂದು ತಿಳಿಸಿದರು.
ಜೂನ್ ತಿಂಗಳಲ್ಲಿ ವಿದ್ಯಾಪ್ರವೇಶ ಹಾಗೂ ಸೇತುಬಂಧದ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಬೋಧನೆ ನಡೆಯಲಿದೆ. ಪಾಲಕರು ಮಕ್ಕಳನ್ನು ಶಾಲೆಗೆ ತಪ್ಪದೆ ಕಳುಹಿಸಬೇಕು. ವಿದ್ಯಾರ್ಥಿಗಳು ಕೂಡಾ ಶಾಲೆಗೆ ಗೈರಾಗದೆ ಪ್ರತಿ ದಿನ ಹಾಜರಾಗಬೇಕು ಎಂದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಶಿಕ್ಷಣ ಸಂಯೋಜಕ ಸಂಜೀವ್‌ಕುಮಾರ್, ಸಿಆರ್‌ಪಿಗಳು ಹಾಗೂ ಶಿಕ್ಷಕರು ಇದ್ದರು.