- ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ನೌಕರನ ಮೇಲೆ ಹಲ್ಲೆ
- ದೊಡ್ಡಿಬೀಳು ಬಳಿ ಅಡ್ಡಗಟ್ಟಿದ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ
- ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಇಂಡಿಗೋ ಏರ್‌ಲೈನ್ಸ್(Airlines) ನೌಕರನನ್ನು ನಗರದ ಹೊರವಲಯ ದೊಡ್ಡಿಬೀಳು(Doddibeelu) ಗ್ರಾಮದ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ.
ಭದ್ರಾವತಿ ನಿವಾಸಿ, ವಿಮಾನಯಾನ ಸಂಸ್ಥೆಯೊಂದರ ಗ್ರೌಂಡ್ ಹ್ಯಾಂಡ್ಲಿಂಗ್(Ground Handling) ವಿಭಾಗದ ಉದ್ಯೋಗಿ ದರ್ಶನ್ ನಾಗರಾಜ ಹಲ್ಲೆಗೊಳಗಾದವರು. ಮಾ.27ರಂದು ಸಂಜೆ ಶಿವಮೊಗ್ಗ ವಿಮಾನ ನಿಲ್ದಾಣ(Airport)ದಲ್ಲಿ ಕೆಲಸ ಮುಗಿಸಿ ದರ್ಶನ್ ಸಹೋದ್ಯೋಗಿ ಗುರುಪ್ರಸಾದ್ ಅವರೊಂದಿಗೆ ಬೈಕ್‌ನಲ್ಲಿ ದೊಡ್ಡಿಬೀಳು ಗ್ರಾಮದ ರಸ್ತೆ ಮೂಲಕ ಭದ್ರಾವತಿಗೆ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬೆನ್ನಟ್ಟಿ ಬಂದ ಮೂವರು ಅಪರಿಚಿತರು(Strangers) ಅವರನ್ನು ಅಡ್ಡಗಟ್ಟಿದ್ದಾರೆ.
ಕಾರಣವಿಲ್ಲದೆ ದರ್ಶನ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಿಡಿಗೇಡಿಗಳು, ದೊಣ್ಣೆಯಿಂದ ದರ್ಶನ್ ನಾಗರಾಜ ಅವರ ತಲೆ ಮತ್ತು ಬೆನ್ನಿಗೆ ಹೊಡೆದಿದ್ದಾರೆ. ಇನ್ನೊಂದು ಬಾರಿ ಈ ರಸ್ತೆಯಲ್ಲಿ ಕಂಡರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.