ಎಐ ಡೇಟಾ ಸೆಂಟರ್‌ಗಳು ಕುರಿತ ಚರ್ಚಾ ಕಾರ್ಯಕ್ರಮವನ್ನು ಪರಿಸರ ಚಿಂತಕ ಪ್ರೊ. ಎಲ್.ಕೆ.ಶ್ರೀಪತಿ ಉದ್ಘಾಟಿಸಿದರು. ಪ್ರೊ. ಬಿ.ಎಂ.ಕುಮಾರಸ್ವಾಮಿ, ಡಾ. ಜಿ.ಮಂಜುನಾಥ್, ಕೆ.ಟಿ.ಗಂಗಾಧರ್, ಎಚ್.ಕೆ.ವಿವೇಕಾನಂದ ಇತರರಿದ್ದರು. 
ಶಿವಮೊಗ್ಗ

ಎಐನಿಂದ ಉದ್ಯೋಗ ಕ್ಷೇತ್ರಕ್ಕೆ ಕುತ್ತು I ai employment

ಪ್ರಮುಖ ಮುಖ್ಯಾಂಶಗಳು

  • ಎಐ ಬಂದ ಮೇಲೆ ಉದ್ಯೋಗ ಸೃಷ್ಟಿ ಬದಲು ಕಡಿತ ಹೆಚ್ಚಳ
  • ತುಮಕೂರಿನ ಡಾ. ಜಿ.ಮಂಜುನಾಥ್ ಹೇಳಿಕೆ
  • ಎಐ ಡೇಟಾ ಸೆಂಟರ್ ಕುರಿತು ಚರ್ಚೆ
ಶಿವಮೊಗ್ಗ: ಕೃತಕ ಬುದ್ಧಿಮತ್ತೆ(ಎಐ) (ai) ಡೇಟಾ ಸೆಂಟರ್‌ಗಳು (data centers) ಅಪಾರ ಪ್ರಮಾಣದ ಶುದ್ಧ ನೀರು ಬಯಸುತ್ತವೆ. ಹೆಚ್ಚಿನ ವಿದ್ಯುತ್, ಭೂಮಿಯನ್ನು ಒದಗಿಸಬೇಕು. ಇಷ್ಟೆಲ್ಲ ಆದ ಮೇಲೆ ಉದ್ಯೋಗ (employement) ಸೃಷ್ಟಿಯಾಗುವ ಬದಲು ಈಗ ಕೆಲಸ ಮಾಡುತ್ತಿರುವವರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮದ ಸಂಯೋಜಕ ಡಾ. ಜಿ.ಮಂಜುನಾಥ್ ಹೇಳಿದರು.
ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್‌ನಿಂದ ಗುರುವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಏರ್ಪಡಿಸಿದ್ದ ಎಐ ಡೇಟಾ ಸೆಂಟರ್‌ಗಳು-ಅವಕಾಶಗಳು, ಸವಾಲುಗಳು ಹಾಗೂ ಸುಸ್ಥಿರ ಭವಿಷ್ಯ ಕುರಿತ ಚರ್ಚೆಯಲ್ಲಿ ಮಾತನಾಡಿ, ಹತ್ತು ಸಾವಿರ ಜನರ ಕೆಲಸವನ್ನು 125 ರೋಬಾಟ್‌ಗಳೇ ನಿರ್ವಹಿಸುತ್ತವೆ. 2030ಕ್ಕೆ ಉದ್ಯೋಗ ಸೃಷ್ಟಿ ಶೂನ್ಯಕ್ಕೆ ತಲುಪಲಿದೆ ಎಂದು ತಿಳಿಸಿದರು.
ರೋಬಾಟ್‌ಗಳು ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳಬಲ್ಲವು. ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ಐಟಿ ಕಂಪನಿ ಉದ್ಯೋಗಿಗಳು, ಹಣಕಾಸು ಸಂಸ್ಥೆಗಳು, ಜವಳಿ ಹೀಗೆ ಎಲ್ಲ ರಂಗದಲ್ಲೂ ಉದ್ಯೋಗ ಕಡಿತ ಹೆಚ್ಚಾಗಲಿದೆ. ಮನೆ ಕೆಲಸದವರಿಗೂ ಉದ್ಯೋಗ ಸಿಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೃಹತ್ ಡೇಟಾ ಸೆಂಟರ್‌ಗಳು ದಿನಕ್ಕೆ ಸರಾಸರಿ ಎರಡು ಕೋಟಿ ಲೀಟರ್ ಶುದ್ಧ ನೀರು ಬಳಸಿಕೊಳ್ಳುತ್ತವೆ. ವಾರ್ಷಿಕ ನೀರಿನ ಬಳಕೆ 750 ಕೋಟಿ ಲೀಟರ್‌ಗೂ ಹೆಚ್ಚಾಗಿದೆ. ಮೈಸೂರು ಹಾಗೂ ಮಂಡ್ಯದಲ್ಲಿ ರೈತರು ವಾರ್ಷಿಕವಾಗಿ ಬಳಸುವ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚು. ಒಂದು ಡೇಟಾ ಸೆಂಟರ್‌ಗೆ ಇಷ್ಟು ನೀರಿನ ಅವಶ್ಯಕತೆ ಇರುವಾಗ ಮೂರ‌್ನಾಲ್ಕು ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಿದರೆ ಪರಿಣಾಮ ಏನಾಗಬಹುದು ಎಂದು ಪ್ರಶ್ನಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್, ಪ್ರೊ. ಎಲ್.ಕೆ.ಶ್ರೀಪತಿ, ಸಾಮಾಜಿಕ ಕಾರ್ಯಕರ್ತ ಎಚ್.ಕೆ.ವಿವೇಕಾನಂದ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾಂತೇಶ್ ಕದರಮಂಡಲಗಿ, ರಮೇಶ್ ಹೆಗ್ಡೆ ಇದ್ದರು.

ಶೇ.20 ಮಂದಿಗಷ್ಟೇ ಉದ್ಯೋಗ

ಡೇಟಾ ಸೆಂಟರ್ ಎಂಬುದು ಎಐ ಬೆನ್ನೆಲುಬು. ಎಐ ತಂತ್ರಜ್ಞಾನ ಎಲ್ಲವನ್ನೂ ಆವರಿಸಿಕೊಳ್ಳುತ್ತಿದೆ. ಗೂಗಲ್, ಚಾಟ್ ಜಿಪಿಟಿಯಿಂದ ಸ್ವಂತ ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ವರ್ಷಕ್ಕೆ 1,500 ವಿದ್ಯಾರ್ಥಿಗಳು ಜೆಎನ್‌ಎನ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾರೆ. ಪ್ರಸ್ತುತ ಶೇ.20 ಮಂದಿಗೂ ಕ್ಯಾಂಪಸ್ ಸಂದರ್ಶನದಿಂದ ಉದ್ಯೋಗ ಸಿಗದ ಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ ಎಂದು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ರಾಧಿಕಾ ಹೇಳಿದರು.

ವಿಕಾಸದ ಹೆಸರಿನಲ್ಲಿ ವಿನಾಶ

ವಿಕಾಸದ ಹೆಸರಿನಲ್ಲಿ ವಿನಾಶದತ್ತ ಸಾಗುತ್ತಿದ್ದೇವೆ. ಅನಾಹುತಗಳನ್ನು ಅನುಭವಿಸುತ್ತಿದ್ದರೂ ಅಪಾಯಕಾರಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗ ದೇಶದಲ್ಲೇ ಮೊದಲ ಬಾರಿಗೆ ಎಐ ವಿರುದ್ಧ ಕರ್ನಾಟಕದಲ್ಲಿ ಕಹಳೆ ಮೊಳಗಿದೆ. ಈ ಹೋರಾಟವನ್ನು ಬೇರೆ ರಾಜ್ಯಗಳಿಗೂ ಕೊಂಡೊಯ್ಯಲಾಗುವುದು. ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದೆ. ದೇಶದ ವಿವಿಧೆಡೆ ಭೂಮಿ, ಅರಣ್ಯ, ಜಮೀನಿಗೆ ಸಂಬಂಧಿಸಿ 1,200ಕ್ಕೂ ಹೆಚ್ಚು ಹೋರಾಟಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಸಂಯೋಜಕ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.

ಡೇಟಾ ಕಳವಿನ ಅಪಾಯ

ದೇಶದಲ್ಲಿ 1.80 ಕೋಟಿ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಇಂಟರ್‌ನೆಟ್ ಎಂಬುದು ಪೋಸ್ಟ್‌ಮನ್, ಆದರೆ ಡೇಟಾ ಸೆಂಟರ್ ಪೋಸ್ಟ್ ಆಫೀಸಿನಂತೆ. ಒಟ್ಟಾರೆ ಡೇಟಾಗಳಲ್ಲಿ ಶೇ.80ರಷ್ಟು ಮಾಹಿತಿ ಬೇರೆ ದೇಶಗಳಲ್ಲಿ ಸಂಗ್ರಹವಾಗಿವೆ. ನಮ್ಮಲ್ಲಿ ಶೇ.20ರಷ್ಟು ಡೇಟಾ ಸಂಗ್ರಹದ ಸಾಮರ್ಥ್ಯ ಇದೆ. ದೇಶದ ಭದ್ರತೆ, ಆರ್ಥಿಕತೆ, ವೈಜ್ಞಾನಿಕ, ತಂತ್ರಜ್ಞಾನ, ಕೃಷಿ ಹೀಗೆ ಹಲವು ವಲಯಗಳಿಗೆ ಸಂಬಂಧಿಸಿದ ಡೇಟಾಗಳು ಬೇರೆ ದೇಶಗಳಲ್ಲಿದ್ದು, ಅವುಗಳು ಕಳುವಾಗುವ ಅಪಾಯವಿದೆ. ವಿಶ್ವದಲ್ಲಿ 12 ಸಾವಿರ ಡೇಟಾ ಸೆಂಟರ್‌ಗಳಿದ್ದು, ಭಾರತ ಅಗ್ರ ಹತ್ತು ದೇಶಗಳ ಪಟ್ಟಿಯಲ್ಲೂ ಇಲ್ಲ. ಹೀಗಾಗಿ ಭಾರತವನ್ನು ವಿಶ್ವದ ಡೇಟಾ ಸೆಂಟರ್‌ಗಳ ಕೇಂದ್ರ ಸ್ಥಾನ ಮಾಡಲು ಭಾರತ ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದು ಪ್ರೊ. ಬಿ.ಎಂ.ಕುಮಾರಸ್ವಾಮಿ ತಿಳಿಸಿದರು.
ಸೆಂಟರ್‌ಗಳಿಗೆ ಎಲ್ಲ ವ್ಯವಸ್ಥೆ
ಪ್ರಸ್ತುತ ಭಾರತದಲ್ಲಿ 40-400 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್‌ಗಳಿವೆ. ವಿಶಾಖಪಟ್ಟಣಂನಲ್ಲಿ ಸಾವಿರ ಮೆಗಾವಾಟ್ ಸಾಮರ್ಥ್ಯವುಳ್ಳ ಡೇಟಾ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕೆ ಮಾರುಕಟ್ಟೆ ಬೆಲೆಯ ಶೇ. 25 ಸಬ್ಸಿಡಿಯಲ್ಲಿ 480 ಎಕರೆ ಭೂಮಿ ಒದಗಿಸಲಾಗಿದೆ. 10 ವರ್ಷ ರಿಯಾಯಿತಿ ದರದಲ್ಲಿ ನೀರು ಕೊಡಲಾಗುತ್ತದೆ. 15 ವರ್ಷ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಡೇಟಾ ಸೆಂಟರ್‌ಗಳಿಗೆ ಪೂರಕವಾಗಿ ಕಾನೂನುಗಳನ್ನೇ ಬದಲಾಯಿಸಲು ಸರ್ಕಾರಗಳು ಮುಂದಾಗಿವೆ. ಬೇರೆ ಕ್ಷೇತ್ರದಲ್ಲಿರುವ ದೈತ್ಯ ಕಂಪನಿಗಳು ಕೂಡಾ ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಮುಂದೆ ಬರುತ್ತಿವೆ ಎಂದು ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.
ಆಲೋಚನಾ ಕ್ರಮ ಬದಲಾಗಲಿ
ನಮ್ಮಲ್ಲಿ ಎಲ್ಲವನ್ನೂ ಆಲೋಚಿಸುವ ಶಕ್ತಿ ಇರುವಾಗ ಕೃತಕ ಬುದ್ಧಿಮತ್ತೆ ಅವಶ್ಯಕತೆ ಏನಿದೆ? ಕೃಷಿ ನಮ್ಮ ಮುಖ್ಯ ಆರ್ಥಿಕತೆ. ನೀರು ಇದಕ್ಕೆ ಮೂಲಾಧಾರ. ರೈತರಿಗೆ ಕೊಡಬೇಕಾದ ಜಲಾಶಯಗಳ ನೀರನ್ನು ಕದ್ದುಮುಚ್ಚಿ ಡೇಟಾ ಸೆಂಟರ್‌ಗಳಿಗೆ ಕೊಡಲಾಗುತ್ತಿದೆ. ಫಲವತ್ತಾದ ಕೃಷಿ ಜಮೀನನ್ನೂ ಸರ್ಕಾರ ಸ್ವಾಧೀನಕ್ಕೆ ಪಡೆದು ಡೇಟಾ ಸೆಂಟರ್ ಸ್ಥಾಪನೆಗೆ ನೀಡುತ್ತದೆ. ಮೊದಲು ದೇಶದಲ್ಲಿ ಭೂಮಿಯ ಬಳಕೆ ಬಗ್ಗೆ ಸ್ಪಷ್ಟವಾದ ನೀತಿ ರೂಪಿಸಬೇಕು. ಸರ್ಕಾರದ ಆಲೋಚನಾ ಕ್ರಮಗಳು ಬದಲಾಗಬೇಕು ಎಂದು ಡಾ. ಜಿ.ಮಂಜುನಾಥ್ ಹೇಳಿದರು.