ಹ್ಯಾಕ್‌ಫೆಸ್ಟ್ 1.0ದ ಅಲ್ಟಿಮೇಟ್ ಕೋಡಿಂಗ್ ಚಾಲೆಂಜ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾರ್ತಿಕ್ ಎಲ್.ನಾಗರ್, ಎಸ್.ಎನ್.ನಾಗರಾಜ, ಡಾ.ಎಸ್.ವಿ.ಸತ್ಯನಾರಾಯಣ, ಬಿ.ಎಸ್.ಉಜ್ವಲಾ, ಹೃಷಿಕೇಶ್ ಕೆಂಭಾವಿ ಇದ್ದರು.
- ಜೆಎನ್‌ಎನ್ ಕಾಲೇಜಿನಲ್ಲಿ ಹ್ಯಾಕ್‌ಫೆಸ್ಟ್
- ಚೆನ್ನೈ ಕಾಲೇಜಿಗೆ ಪ್ರಥಮ ಬಹುಮಾನ
ಶಿವಮೊಗ್ಗ: ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೈಟ್ ಬ್ರಿಗೇಡ್ ಕ್ಲಬ್‌ಯಿಂದ ಹ್ಯಾಕ್‌ಫೆಸ್ಟ್ 1.0ದ ಅಲ್ಟಿಮೇಟ್ ಕೋಡಿಂಗ್ ಚಾಲೆಂಜ್ (challenge) ಕಾರ್ಯಕ್ರಮವನ್ನು ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ವಿವಿಧ ಕಾಲೇಜುಗಳ ಸುಮಾರು 150 ತಂಡಗಳಿಂದ 600 ವಿದ್ಯಾರ್ಥಿಗಳು (students) ಇದರಲ್ಲಿ ಭಾಗವಹಿಸಿ ನವೀನ ತಾಂತ್ರಿಕ (technical) ಯೋಜನೆಗಳನ್ನು ನಿರ್ಮಿಸಿ ಪ್ರಸ್ತುತಪಡಿಸಿದರು.
ಅಂತಿಮ ಸುತ್ತಿನಲ್ಲಿ ತಮಿಳುನಾಡಿನ ನಂದಾ ಕಾಲೇಜ್ ಆಫ್ ಟೆಕ್ನಾಲಜಿ ತಂಡ (ಪ್ರಥಮ), ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ ತಂಡ (ದ್ವಿತೀಯ), ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು. ವಿಜೇತ ತಂಡಗಳಿಗೆ ಕ್ರಮವಾಗಿ 30, 20 ಹಾಗೂ 10 ಸಾವಿರ ರೂ. ನಗದು ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಪೇಗಾ ಸಂಸ್ಥೆಯ ಹಿರಿಯ ಮೆಷಿನ್ ಲರ್ನಿಂಗ್ ಇಂಜಿನಿಯರ್ ಕಾರ್ತಿಕ್ ಎಲ್.ನಾಗರ್ ಮಾತನಾಡಿ, ಕೃತಕ ಬುದ್ದಿಮತ್ತೆಯು ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಎಐ ಉಪಕರಣಗಳು ವಿದ್ಯಾರ್ಥಿಗಳಿಗೆ ವೇಗವಾಗಿ ಕಲಿಯಲು, ಹೊಸ ಆಲೋಚನೆಗಳನ್ನು ಅನ್ವೇಷಿಸಲು ಹಾಗೂ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹ್ಯಾಕಥಾನ್ ಎಂಬುದು ವಿದ್ಯಾರ್ಥಿಗಳಿಗೆ ಸೃಜನಶೀಲತೆ, ತಾಂತ್ರಿಕ ಪರಿಣಿತಿ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಬಹುಮಾನ ವಿತರಿಸಿದರು. ಪ್ರಾಚಾರ್ಯ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಬಿ.ಎಸ್.ಉಜ್ವಲಾ, ಸಂಯೋಜಕ ಹೃಷಿಕೇಶ್ ಕೆಂಭಾವಿ, ಸಹ ಸಂಯೋಜಕ ಮಲ್ಲಿಕಾರ್ಜುನ ಎಸ್.ಸಿಂದಿಗೆರೆ ಮುಂತಾದವರಿದ್ದರು.