ಶಿಕಾರಿಪುರ ತಾಲೂಕಿನ ಜಕ್ಕಿನಕೊಪ್ಪ ಗ್ರಾಮದಲ್ಲಿ ಏರ್ಪಡಿಸಿದ್ದ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಕೆ.ಎಸ್.ಗುರುಮೂರ್ತಿ, ಮಹಾದೇವ್ ಪಾಟೀಲ್, ವೀರನಗೌಡ ಇತರರಿದ್ದರು. 
ಶಿವಮೊಗ್ಗ

ಯುವ ಮತದಾರರನ್ನು ಪಟ್ಟಿಗೆ ಸೇರಿಸಿ

ಶಿಕಾರಿಪುರ: ಗ್ರಾಮಗಳ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಕಾರ್ಯಕರ್ತರು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಹೊಸೂರು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಜಕ್ಕಿನಕೊಪ್ಪ ಗ್ರಾಮದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಷದ ಸಾಂಸ್ಥಿಕ ಬಲವರ್ಧನೆ ಮತ್ತು ಪ್ರಜಾಪ್ರಭುತ್ವದ ಅಡಿಪಾಯ ಆಗಿರುವ ಮತದಾರರ ಪಟ್ಟಿಯ ವ್ಯವಸ್ಥಿತ ಪರಿಷ್ಕರಣೆಗೆ ತಳಮಟ್ಟದಿಂದ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಪಕ್ಷ. ಚುನಾವಣೆ ದೃಷ್ಟಿಯಿಂದ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ಜನರಿಗೆ ಸ್ಪಂದಿಸುವ ಕೆಲಸ ಪಕ್ಷದಿಂದ ಆಗುತ್ತಿದೆ. ಹೊಸೂರು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಹತ್ವ ಅರಿತುಕೊಳ್ಳಬೇಕು. ಅರ್ಹ ಯುವ ಮತದಾರರು ಪಟ್ಟಿಗೆ ಸೇರ್ಪಡೆ ಆಗಬೇಕು. ಬಿಎಲ್‌ಎ-2 ಪದಾಧಿಕಾರಿಗಳು ಹಾಗೂ ಬೂತ್ ಅಧ್ಯಕ್ಷರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿಯ ಲೋಪದೋಷಗಳನ್ನು ಸರಿಪಡಿಸುವ ಹಾಗೂ ಹೊಸಬರ ಹೆಸರುಗಳ ಸೇರ್ಪಡೆಯ ಪ್ರಗತಿಯನ್ನು ನಿರಂತರ ಪರಿಶೀಲಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಿ.ವೈ.ರಾಘವೇಂದ್ರ, ಸ್ಥಳೀಯ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಹೊಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹಾದೇವ್ ಪಾಟೀಲ್, ಸುಧೀರ್ ಮಾರವಳ್ಳಿ, ಮಂಡಲ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ರುದ್ರೇಶ್, ಲಕ್ಷ್ಮಣ್, ರಾಮಾನಾಯ್ಕ, ವೀರನಗೌಡ, ಗುರುರಾಜ್ ಇತರರಿದ್ದರು.