ಶಿವಮೊಗ್ಗದಲ್ಲಿ ಶನಿವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.  
ಶಿವಮೊಗ್ಗ

ದಾನಿಗಳು ಕೊಟ್ಟ ಜಾಗ ಉಳಿಸಲು ಕ್ರಮ । Govt school land

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಿಗೆ ಕೊಟ್ಟ ದಾನಪತ್ರಗಳ ಬಗ್ಗೆ ಪರಿಶೀಲನೆ
  • ಜಾಗದ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ
  • ಶಿವಮೊಗ್ಗದಲ್ಲಿ ಶನಿವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ
ಶಿವಮೊಗ್ಗ: ಸರ್ಕಾರಿ ಶಾಲೆಗಳಿಗೆ ದಾನಿಗಳು(Donors) ಕೊಟ್ಟ ಜಾಗಕ್ಕೆ ಅವರ ಮಕ್ಕಳು, ಮೊಮ್ಮಕ್ಕಳು ಕೇಸ್(Case) ಹಾಕಿದ್ದಾರೆ. ಈ ಬಗ್ಗೆ ದಾನ ಕೊಟ್ಟಿರುವ ಜಾಗಗಳನ್ನು ಸರ್ಕಾರಿ ಶಾಲೆಗಳಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಅಧಿವೇಶನದಲ್ಲಿ ಮಸೂದೆ(Bill)ಪಾಸ್ ಮಾಡುವ ಸಂಬಂಧ ಎಲ್ಲ ತಯಾರಿ ಮಾಡಿಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸರ್ಕಾರಿ ಶಾಲೆಗಳಿಗೆ ಈ ಹಿಂದೆ ಬಹಳಷ್ಟು ದಾನಿಗಳು ಜಾಗ ಕೊಟ್ಟಿದ್ದಾರೆ. ಕೆಲವರು ದಾನಪತ್ರ(Donation letter)ಗಳನ್ನೂ ಮಾಡಿಕೊಟ್ಟಿದ್ದಾರೆ. ಮತ್ತೆ ಕೆಲವರು ಪತ್ರಗಳನ್ನು ಮಾಡಿಕೊಟ್ಟಿಲ್ಲ. ಅವುಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇದೀಗ ಜಾಗದ ವಿವಾದ ಅಲ್ಲಲ್ಲಿ ಕೇಳಿಬರುತ್ತಿದ್ದು, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ಕಮಿಟಿ(Committee) ರಚನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಮುತುವರ್ಜಿ ವಹಿಸಿ ಈ ಬಗ್ಗೆ ಎಷ್ಟು ಕೇಸ್‌ಗಳು ಇವೆ ಎಂಬ ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದು, ಶಿಕ್ಷಣ ಇಲಾಖೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.