ತರೀಕೆರೆ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು.
ತರೀಕೆರೆ: ಸರ್ಕಾರ ರೈತರ ಅನುಕೂಲಕ್ಕಾಗಿ ರಾಗಿ,ಭತ್ತ ಇನ್ನಿತರ ಆಹಾರ ಧಾನ್ಯಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದ್ದು, ಖರೀದಿಯಲ್ಲಿ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳಿಗೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಸೂಚನೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಸಾಮೆ ಮತ್ತು ನವಣೆ ಧಾನ್ಯಗಳ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಸರ್ಕಾರ ಆಹಾರ ಧಾನ್ಯ ಖರೀದಿಗೆ ಗ್ರೇಡ್ ನಿಗದಿ ಮಾಡಿದ್ದು, ಎ ಗ್ರೇಡ್ ಕ್ವಿಂಟಾಲ್ ಭತ್ತಕ್ಕೆ 2,389 ರೂ, ಸಾಮಾನ್ಯ ದರ್ಜೆ ಭತ್ತಕ್ಕೆ 2,369ರೂ, ರಾಗಿಗೆ 4,886 ರೂ, ಸಾಮೆ ಮತ್ತು ನವಣೆಗೆ 4,886 ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಿದೆ. ಸದ್ಯ ತರೀಕೆರೆ ಮತ್ತು ಅಜ್ಜಂಪುರದಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದು, ಮುಂದಿನ ವರ್ಷ ಶಿವನಿ ಆರ್‌ಎಸ್‌ನಲ್ಲೂ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.
ಖರೀದಿಗೆ ನೋಂದಾಯಿಸಿಕೊಂಡಿರುವ ರೈತರಿಂದ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ತೂಕದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಅನಗತ್ಯ ಹಣ ಪಾವತಿ ವಿಳಂಬ ಇನ್ನಿತರ ಸಮಸ್ಯೆ ಉಂಟಾದರೆ ಸದನದಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪ ನಿರ್ದೇಶಕ ಯೋಗಾನಂದ್ ಮಾತನಾಡಿ, ಈ ವರ್ಷ ತರೀಕೆರೆ ತಾಲೂಕಿನಲ್ಲಿ 1,266 ರೈತರು, 35,640 ಕ್ವಿಂಟಾಲ್, ಅಜ್ಜಂಪುರ ತಾಲೂಕಿನಲ್ಲಿ 4,558 ರೈತರು, 1.17 ಲಕ್ಷ ಕ್ವಿಂಟಾಲ್ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಎಪಿಎಂಸಿ ಮಾಜಿ ನಿರ್ದೇಶಕ ಟಿ.ಆರ್.ಶ್ರೀಧರ್, ಕಾರ್ಯದರ್ಶಿ ಮೋಹನ್, ಕೆಎ್ಸಿ ಜಿಲ್ಲಾ ವ್ಯವಸ್ಥಾಪಕಿ ಅನುರಾಧ, ರೈತ ಉತ್ಪಾದಕ ಸಂಘದ ರವಿ ಮತ್ತಿತರರಿದ್ದರು.