ಅಮಿತ್ ಶಾ ಅವರನ್ನು ಭೇಟಿಯಾದ ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ, ಸತೀಶ್ಚಂದ್ರ ಅವರನ್ನೊಳಗೊಂಡ ನಿಯೋಗ ಮನವಿ ಸಲ್ಲಿಸಿತು.
- ಸಂಸದ ಬಿ.ವೈ.ರಾಘವೇಂದ್ರ ಒಳಗೊಂಡ ನಿಯೋಗದಿಂದ ಆಗ್ರಹ
- ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಮನವಿ
- ಬೆಳೆಗಾರರ ಸಂಕಷ್ಟದ ಕುರಿತು ಮನವರಿಕೆ
ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಅವರನ್ನು ಒಳಗೊಂಡ ನಿಯೋಗ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಅಕ್ರಮ ಅಡಿಕೆ (areca) ಆಮದು (import) ಹಾಗೂ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಪ್ರಬಲ ಕಾನೂನು (laws) ರೂಪಿಸುವಂತೆ ಆಗ್ರಹಿಸಿತು.
ಕಳ್ಳ ಮಾರ್ಗದಲ್ಲಿ ದೇಶದೊಳಕ್ಕೆ ಅಡಿಕೆ ಆವಕ ಆಗುತ್ತಿರುವುದು ಹಾಗೂ ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ಪಾರಂಪರಿಕವಾಗಿ ಅಡಿಕೆ ಬೆಳೆಯುವ ಪ್ರದೇಶಗಳ ರೈತರಿಗೆ ಸಂಕಷ್ಟ ಎದುರಾಗಿದೆ. ಇದು ದೇಶದ ಅಡಿಕೆ ಮಾರುಕಟ್ಟೆಗೆ ಮಾರಕವಾಗಿದೆ ಎಂದು ಗೃಹ ಸಚಿವರಿಗೆ ನಿಯೋಗ ಮನವರಿಕೆ ಮಾಡಿತು.
ಕರ್ನಾಟಕ ಸೇರಿದಂತೆ ಅಡಿಕೆ ಬೆಳೆಯುವ ರಾಜ್ಯಗಳ ಲಕ್ಷಾಂತರ ರೈತ ಕುಟುಂಬಗಳು, ಅಕ್ರಮ ಅಡಿಕೆ ಆಮದಿನಿಂದ ಎದುರಿಸುವ ಸವಾಲಿನ ಸಂಕಷ್ಟದ ಪರಿಸ್ಥಿತಿಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಲಾಯಿತು. ಅಡಿಕೆಗೆ ತಗುಲುತ್ತಿರುವ ರೋಗಗಳು, ಸಂಸ್ಕರಣಾ ವೆಚ್ಚ, ಕುಸಿಯುತ್ತಿರುವ ಉತ್ಪಾದನೆ ಹೀಗೆ ಹಲವು ಸವಾಲುಗಳನ್ನು ರೈತರು ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಇತರರಿದ್ದರು.
ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ
ವಿದೇಶಿ ಮೂಲದ ಅಡಿಕೆಯನ್ನು ಗಡಿ, ಬಂದರು ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಸಾಗಿಸುವ ಬಗ್ಗೆ ಹಾಗೂ ಆಮದು ವರ್ಗೀಕರಣಗಳು ಮತ್ತು ವ್ಯಾಪಾರ ದಾಖಲಾತಿಗಳ ಸಂಭಾವ್ಯ ದುರುಪಯೋಗದ ಬಗ್ಗೆ ಗಮನಹರಿಸಬೇಕು. ಹುರಿದ ಒಣಹಣ್ಣುಗಳು ಮತ್ತು ಬೀಜಗಳು ಎಂದು ಘೋಷಿಸಲಾದ ಸರಕುಗಳ ಸೂಕ್ಷ್ಮ ಪರಿಶೀಲನೆ ನಡೆಸಬೇಕು. ಪ್ರತಿ ಕೆಜಿ ಅಡಿಕೆ ಆಮದಿಗೆ 351 ರೂ. ಸುಂಕವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಡಿಕೆ ಯಾವ ದೇಶದಿಂದ ಬರುತ್ತಿದೆ. ಅದರ ಘೋಷಿತ ಮೌಲ್ಯ ಮತ್ತು ರವಾನೆಗಳ ಮಾರ್ಗನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು ಎಂದು ಗೃಹ ಸಚಿವರಿಗೆ ಬೇಡಿಕೆ ಸಲ್ಲಿಸಲಾಯಿತು.
ಅಕ್ರಮ ಅಡಿಕೆ ದೇಶದ ಮಾರುಕಟ್ಟೆಗಳನ್ನು ತಲುಪುವುದನ್ನು ತಡೆಯಲು, ಪ್ರವೇಶ ಸ್ಥಳಗಳಲ್ಲಿ ಕಣ್ಗಾವಲು ಬಲಪಡಿಸಬೇಕು. ಗೃಹ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆ, ಹಣಕಾಸು, ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ, ರೆವಿನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯ, ಕಸ್ಟಮ್ಸ್ ಮತ್ತು ಸಂಬಂಧಿತ ರಾಜ್ಯಗಳ ಸಚಿವಾಲಯವನ್ನು ಒಳಗೊಂಡಂತೆ ವ್ಯವಸ್ಥಿತ ಕಾರ್ಯತಂತ್ರ ಸ್ಥಾಪಿಸಬೇಕು. ನ್ಯಾಯಯುತ ಮಾರುಕಟ್ಟೆ ಕಲ್ಪಿಸಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಕನಿಷ್ಠ ಆಮದು ಬೆಲೆ, ಸುರಕ್ಷತೆ ಸೇರಿದಂತೆ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ನಿರಂತರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ. ಇಂತಹ ರೈತ ಹಿತರಕ್ಷಣೆಯ ಪೂರಕ ಕ್ರಮಗಳು ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ನಿರಂತರ ಬದ್ಧತೆ ಪ್ರತಿಬಿಂಬಿಸುತ್ತವೆ.
— ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯ