ಶಿವಮೊಗ್ಗದಲ್ಲಿ ನೂತನ ಎಸ್ಪಿ ಬಿ.ನಿಖಿಲ್ ಮಾತನಾಡಿದರು. ಎಎಸ್‌ಪಿಗಳಾದ ಎ.ಜಿ.ಕಾರ್ಯಪ್ಪ, ರಮೇಶ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು. 
ಶಿವಮೊಗ್ಗ

ನಶೆಮುಕ್ತ ಶಿವಮೊಗ್ಗಕ್ಕಾಗಿ ಕ್ರಮ ನಿಶ್ಚಿತ । War on Drugs

ಪ್ರಮುಖ ಮುಖ್ಯಾಂಶಗಳು

  • ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮೊದಲ ಆದ್ಯತೆ
  • ಡ್ರಗ್ಸ್ ಕೇಸ್‌ಗಳನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಕ್ರಮ
  • ಸುದ್ದಿಗೋಷ್ಠಿಯಲ್ಲಿ ನೂತನ ಎಸ್ಪಿ ಬಿ.ನಿಖಿಲ್ ಹೇಳಿಕೆ
ಶಿವಮೊಗ್ಗ: ನಶೆಮುಕ್ತ(Drug-free) ಶಿವಮೊಗ್ಗ ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಯುದ್ಧೋಪಾದಿಯಾಗಿ ಕೆಲಸ ಮಾಡಲು ಪೊಲೀಸ್ ಪಡೆ ಸಜ್ಜಾಗಿದೆ ಎಂದು ನೂತನ ಎಸ್ಪಿ ಬಿ.ನಿಖಿಲ್ ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ಡ್ರಗ್ಸ್(Drugs) ವಿರುದ್ಧ ಸಮರ(War) ಸಾರಲಾಗಿದೆ. ಇದನ್ನು ಶಿವಮೊಗ್ಗದಲ್ಲೂ ಕಾರ್ಯಗತ ಮಾಡಲಾಗುವುದು. ಪೆಡ್ಲರ್‌ಗಳು(Peddlers) ಮತ್ತು ವ್ಯಸನಿಗಳನ್ನು ಗುರುತಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಡ್ರಗ್ಸ್ ಕೇಸ್‌ಗಳನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾಗಿ ಯುವ ಜನತೆಯಲ್ಲಿ ಜಾಗೃತಿ(Awareness) ಮೂಡಿಸುವ ಕೆಲಸ ಆಗಲಿದೆ. ಜತೆಗೆ ಪುನರ್ವಸತಿ ಕೇಂದ್ರ(Rehabilitation Centre)ಗಳಿಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮೊದಲ ಆದ್ಯತೆಯಾಗಿದೆ. ಸಂತ್ರಸ್ತರು ಅಥವಾ ನೊಂದವರು ಠಾಣೆಗೆ ಬಂದರೆ ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕೆಂದು ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಎಎಸ್‌ಪಿಗಳಾದ ಎ.ಜಿ.ಕಾರ್ಯಪ್ಪ, ರಮೇಶ್‌ಕುಮಾರ್, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮೇಘಾ ಅಗರ್‌ವಾಲ್ ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗದಲ್ಲಿ ಅವಕಾಶ ಸಿಕ್ಕಿದ್ದು ಸೌಭಾಗ್ಯ

ನನ್ನ ಊರು ಚಿತ್ರದುರ್ಗ. 2017ರ ಬ್ಯಾಚ್‌ನಲ್ಲಿ ಐಪಿಎಸ್ ಪೂರ್ಣಗೊಳಿಸಿ ಭಟ್ಕಳದಲ್ಲಿ ಮೊದಲು ಎಎಸ್‌ಪಿಯಾಗಿ ಕೆಲಸ ಮಾಡಿದ್ದೆ. ಆನಂತರ ಎಎನ್‌ಎಫ್(ಆ್ಯಂಟಿ ನಕ್ಸಲ್ ಫೋರ್ಸ್), ಬಳಿಕ ರಾಯಚೂರು ಮತ್ತು ಕೋಲಾರದಲ್ಲಿ ಎಸ್‌ಪಿಯಾಗಿದ್ದೆ. ಇದೀಗ ಶಿವಮೊಗ್ಗ ಜಿಲ್ಲೆಗೆ ಬಂದಿದ್ದೇನೆ. ಶಿವಮೊಗ್ಗ ಎಲ್ಲ ರಂಗಗಳಲ್ಲೂ ಬಲಿಷ್ಠವಾದ ಇತಿಹಾಸವಿದೆ. ಇದೀಗ ಮಧ್ಯ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ನಿಖಿಲ್ ಹೇಳಿದರು. ಇಲ್ಲಿ ಅಪರಾಧ ತಡೆಗೆ ಏನೆಲ್ಲ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಒಂದು ಹಂತದ ಚರ್ಚೆಯನ್ನು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಶನಿವಾರದಿಂದಲೇ ಪ್ರತಿ ಠಾಣೆಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು.