ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಸುಧೀಂದ್ರ ಪೂಜಾರಿ, ಧನಲಕ್ಷ್ಮೀ, ಎಂ.ಎಂ.ಪರಮೇಶ್ ಇತರರಿದ್ದರು.
ರಿಪ್ಪನ್‌ಪೇಟೆ: ಸಾರ್ವಜನಿಕರು ಸಂಕೋಚವಿಲ್ಲದೆ, ಮುಕ್ತವಾಗಿ ಯಾವುದೇ ಸಮಯಕ್ಕಾದರೂ ಬಂದು ಕೆಲಸ ಮಾಡಿಸಿಕೊಳ್ಳಬಹುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 65 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾಗಿರುವ 25 ಲಕ್ಷ ರೂ. ಅಂದಾಜು ಮೊತ್ತದ ಪಟ್ಟಣದ ಸಾಗರ- ಶಿವಮೊಗ್ಗ ಸಂಪರ್ಕ ರಸ್ತೆ, ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಿಮ್ಮ ಸಮಸ್ಯೆಗಳನ್ನು ನನ್ನಲ್ಲಿ ಮುಕ್ತವಾಗಿ ಚರ್ಚಿಸಬಹುದು. ಜಾತಿ, ಪಕ್ಷ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತೇನೆ. ಕಳೆದ ಎರಡೂವರೆ ವರ್ಷದಲ್ಲಿ ರಿಪ್ಪನ್‌ಪೇಟೆಯ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆ ಗೇರಿಸಲು ಪ್ರಯತ್ನಿಸುತ್ತೇನೆ. ಸಾಧ್ಯವಾಗದಿದ್ದರೆ ಅದೇ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದು ನಿಶ್ಚಿತ ಎಂದರು.
ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮಾತನಾಡಿ, ಶಾಸಕರು ರಿಪ್ಪನ್‌ಪೇಟೆಯ ಸಂಪೂರ್ಣ ಅಭಿವೃದ್ಧಿ ಆಶಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನರಿಗೆ ಹೆಚ್ಚಿನ ನಿರೀಕ್ಷೆ ಇರುವುದರಿಂದ ಶಾಸಕರು ಶೀಘ್ರ ಸಚಿವರಾಗಲಿ ಎಂದು ಆಶಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯರಾದ ಚಂದ್ರೇಶ್, ಪ್ರಕಾಶ್ ಪಾಲೇಕರ್, ಡಿ.ಇ.ಮಧುಸೂದನ, ನಿರುಪಮಾ, ಈಶ್ವರಪ್ಪ ಗೌಡ, ನಾಗಪ್ಪ ಇತರರಿದ್ದರು.