ಸಾಗರದಲ್ಲಿ ಆಯೋಜಿಸಿದ್ದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಎಂ ನಾಗರಾಜ್, ಎಂ.ಡಿ.ಆನಂದ್, ರಾಮಪ್ಪ, ಕೆ.ಎನ್.ನಾಗೇಂದ್ರ ಇತರರಿದ್ದರು. 
ಶಿವಮೊಗ್ಗ

ಮಾರಿಕಾಂಬೆ ಮಹಾದ್ವಾರ ನಿರ್ಮಾಣಕ್ಕೆ ಕ್ರಮ | General Body Meeting

ಸಾಗರ: ನಗರದ ಹೋಟೆಲ್ ವೃತ್ತಕ್ಕೆ ಮಾರಿಕಾಂಬಾ ವೃತ್ತ ಎಂದು ಮರು ನಾಮಕರಣ ಮಾಡಲಾಗುವುದು. ಜತೆಗೆ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಭದ್ರಕಾಳಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗಣಪತಿ ದೇಗುಲದ ಕೆರೆ ಪಕ್ಕದ ಜಾಗದಲ್ಲಿ ಸಭಾಭವನ ಹಾಗೂ ಶೈಕ್ಷಣಿಕ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ. ಇದಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲಾಗುತ್ತದೆ. ಜತೆಗೆ ನಗರದ ಪ್ರವೇಶ ಸ್ಥಳದಲ್ಲಿ ಮಾರಿಕಾಂಬಾ ಮಹಾದ್ವಾರ ನಿರ್ಮಿಸಲಾಗುವುದು ಎಂದರು.
ಎಲ್ಲರಿಗೂ ದೇವಿಯ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ. ಪ್ರತಿಷ್ಠಾನದ ಸದಸ್ಯರು ನಿಮಗೆ ಮತ ನೀಡಿ ಅವಕಾಶ ಕಲ್ಪಿಸಿದ್ದಾರೆ. ಉತ್ತಮ ಕೆಲಸ ಮಾಡುವ ಮೂಲಕ ದೇವಸ್ಥಾನವನ್ನು ಮಾದರಿಯಾಗಿ ನಿರ್ಮಿಸಿ ಎಂದು ಹೇಳಿದರು.
ಹಿಂದಿನ ಸಮಿತಿ ಜಾತ್ರೆ ಸಂದರ್ಭದಲ್ಲಿ ನಿರ್ವಹಿಸಿದ ಲೆಕ್ಕಪತ್ರ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಧ್ವನಿವರ್ಧಕ ಅಳವಡಿಕೆ, ದೇವಸ್ಥಾನ ಸಮಿತಿ ಹೆಸರಿನಲ್ಲಿ ನೀಡಿದ್ದ 3 ಲಕ್ಷ ರೂ. ಮೊತ್ತದ ಚೆಕ್ ಬೌನ್ಸ್ ಆಗಿದ್ದರ ಬಗ್ಗೆ ಚರ್ಚೆ ನಡೆಯಿತು. 
 ಪ್ರತಿಷ್ಠಾನದ ಅಧ್ಯಕ್ಷ ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಆನಂದ್, ಪ್ರಮುಖರಾದ ರಾಮಪ್ಪ, ಶ್ರೀನಿವಾಸ್ ಮೇಸ್ತಿ, ವಿ.ಶಂಕರ್, ಟಿ.ವಿ.ಪಾಂಡುರಂಗ, ಶ್ರೀನಾಥ್, ಕೆ.ಎನ್.ನಾಗೇಂದ್ರ, ನಾಗೇಂದ್ರ ಕುಮಟಾ, ಶರಾವತಿ ಸಿ. ರಾವ್ ಇತರರಿದ್ದರು.