ಆರೋಪಿ ಗುರುರಾಜ್ 
ಶಿವಮೊಗ್ಗ

ಪಾಂಡಿಚೇರಿಯಲ್ಲಿ ಬಲೆಗೆ ಬಿದ್ದ ಆರೋಪಿ | suicide case

ಹೊಳೆಹೊನ್ನೂರು: ಪತ್ನಿ ಸಾವು ಪ್ರಕರಣದಲ್ಲಿ ಆರೋಪಿಯಾಗಿರುವ ಶಿಕಾರಿಪುರದ ದಿಂಡದಹಳ್ಳಿಯ ಕೆಪಿಸಿಎಲ್ ಎಇಇ ಗುರುರಾಜ್‌ನನ್ನು ಪಾಂಡಿಚೇರಿಯಲ್ಲಿ ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ನ.25ರಂದು ಪತಿಯ ಮನೆಯವರ ಕಿರುಕುಳ ತಾಳಲಾರದೆ ಡಿ.ಬಿ.ಹಳ್ಳಿಯ ನವವಿವಾಹಿತೆ ಲತಾ ಸಮೀಪದ ಹಂಚಿನಸಿದ್ದಾಪುರ ಬಳಿ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಎರಡು ದಿನಗಳ ನಂತರ ಶವ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಭದ್ರಾ ನಾಲೆಯಲ್ಲಿ ಸಿಕ್ಕಿತ್ತು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಶಿಕಾರಿಪುರ ತಾಲೂಕು ದಿಂಡದಹಳ್ಳಿ ಗ್ರಾಮದ ಗುರುರಾಜ್‌ನನ್ನು ಲತಾ ವಿವಾಹವಾಗಿದ್ದರು. ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿಯ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಯ ಪುತ್ರಿ ಲತಾ ಮದುವೆಯಾದ ಏಳು ತಿಂಗಳಲ್ಲಿ ಗಂಡನ ಮನೆಯವರಿಂದ ನಾನಾ ರೀತಿಯ ಹಿಂಸೆ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಂದಿನಿಂದ ಪತಿ ಗುರುರಾಜ್ ತಲೆಮರೆಸಿಕೊಂಡಿದ್ದ.
ಮೊಬೈಲ್ ಸೇರಿ ಡಿಜಿಟಲ್ ಉಪಕರಣ ಬಳಸದ ಚಾಲಾಕಿ ಗುರುರಾಜ್ ವಿಶಾಖಪಟ್ಟಣಂ, ಚೆನ್ನೈ, ತಮಿಳುನಾಡು, ಕೇರಳ, ಗೋವಾದಲ್ಲಿ ಸ್ಥಳ ಬದಲಿಸಿ ಪೊಲೀಸರ ದಿಕ್ಕು ತಪ್ಪಿಸಿದ್ದಾನೆ. ಕೊನೆಗೆ ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಉಳಿದಂತೆ ನಾಗರತ್ನಮ್ಮ, ರಾಜೇಶ್ವರಿ, ಶಾರದಮ್ಮ ಹಾಗೂ ಕೃಷ್ಣಪ್ಪ ತಲೆಮರೆಸಿಕೊಂಡಿದ್ದಾರೆ.