- ಬಿಜೆಪಿ ನಾಯಕರ ಮೇಲೆ ವೃಥಾ ದೂರು
- ಎದುರಾಳಿಗಳನ್ನು ಹೆದರಿಸಲು ಕಾಂಗ್ರೆಸ್ ತಂತ್ರ
- ಆರಗ ಜ್ಞಾನೇಂದ್ರ ತೀವ್ರ ವಾಗ್ದಾಳಿ
ಶಿವಮೊಗ್ಗ: ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಹಾಗೂ ಬೆದರಿಸಲು ರಾಜ್ಯ ಸರ್ಕಾರ (goverment) ಪೊಲೀಸ್ (police) ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ (araga) ಜ್ಞಾನೇಂದ್ರ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೆಳಗಾವಿಯಲ್ಲಿ ಸಿ.ಟಿ.ರವಿ ಅವರನ್ನು ದೈಹಿಕವಾಗಿ ಮುಗಿಸಲು ಯತ್ನಿಸಲಾಗಿತ್ತು. ಪ್ರಸ್ತುತ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ದೂರಿದರು.
2016-17ರ ಅವಧಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸುಮಾರು 23 ಸಾವಿರ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ರೌಡಿಶೀಟ್ ತೆರೆದು ಕಿರುಕುಳ ನೀಡಿತ್ತು. ನಮ್ಮನ್ನು ರಾಜಕೀಯ ಹಾಗೂ ಸೈದ್ಧಾಂತಿಕವಾಗಿ ಎದುರಿಸಲಿ ಅದಕ್ಕೆ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಪೊಲೀಸರನ್ನು ಇಟ್ಟುಕೊಂಡು ಹೆದರಿಸುವ ಕೆಲಸಕ್ಕೆ ಕೈಹಾಕಿರುವುದು ಕಾಂಗ್ರೆಸ್ ನಾಯಕರ ಹತಾಶೆಯ ಪ್ರತೀಕ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ಸಿ.ಟಿ.ರವಿ ಅವರ ಮೇಲಂತೂ ಅತ್ಯಂತ ಪ್ರಬಲವಾದ ಸೆಕ್ಷನ್‌ಗಳನ್ನು ಹಾಕಲಾಗುತ್ತಿದೆ. ಗೃಹ ಇಲಾಖೆಯನ್ನು ಸುಧಾರಿಸುವ ಪ್ರಯತ್ನ ಮಾಡದ ಸರ್ಕಾರ, ರಾಜ್ಯದಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ ಅದನ್ನು ನಿಯಂತ್ರಿಸಲು ಆಸಕ್ತಿ ತೋರುತ್ತಿಲ್ಲ. ರಾಜಕೀಯ ವಿರೋಧಿಗಳ ಮೇಲೆ ಪೊಲೀಸರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಸಚಿವರ ಮಾತಿಗೆ ಓಗೊಟ್ಟು ಪೊಲೀಸ್ ಅಧಿಕಾರಿಗಳು ಇದೇ ರೀತಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.