ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
- ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಟೀಕೆ
- ಬಿಜೆಪಿ ಉದ್ದೇಶ ಜನರಿಗೆ ಅರ್ಥವಾಗುತ್ತದೆ
ಶಿವಮೊಗ್ಗ: ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋತಿರುವ ಬಿಜೆಪಿ (bjp) ಈಗ ರಾಜಕೀಯ ಶಕ್ತಿ ವೃದ್ಧಿಗಾಗಿ ಚಿತ್ರದುರ್ಗ(chitradurga) ದಲ್ಲಿ ಬಿಎಸ್‌ವೈ (bsy) ಅಭಿಮಾನೋತ್ಸವ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಿರಿತನದ ಬಗ್ಗೆ ನನಗೆ ಗೌರವವಿದೆ. ಆದರೆ ನನ್ನ ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಅಂತಹ ಕೆಲಸ ಯಡಿಯೂರಪ್ಪ ಅವರಿಂದ ಆಗಿದೆಯೇ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಈ ಅಭಿಮಾನೋತ್ಸವ ಆಯೋಜಿಸಲಾಗಿದೆ. ಒಂದು ರೀತಿಯಲ್ಲಿ ಇದು ಶಕ್ತಿ ಪ್ರದರ್ಶನದ ಸಮಾವೇಶ. ಜನರು ಇದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ ಎಂದು ಹೇಳಿದರು.
ಅಣುಸ್ಥಾವರಕ್ಕ್ಕೆ ವಿರೋಧ
ಸಾಗರ ತಾಲೂಕು ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಿಸುವ ಪ್ರಸ್ತಾವನೆಗೆ ನನ್ನ ವಿರೋಧವಿದೆ. ಯಾವ ಕಾರಣಕ್ಕೂ ಈ ಮಾರಕ ಯೋಜನೆ ಒಪ್ಪುವುದಿಲ್ಲ. ಕೇಂದ್ರ ಸರ್ಕಾರದವರು ರಾಜ್ಯವನ್ನು ಕೇಳದೆ ಮಾರಕ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿದ್ದಾರೆ ಎಂದ ಮಧು ಬಂಗಾರಪ್ಪ ಬೇಸರ ವ್ಯಕ್ತಪಡಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್‌ನಂತಹ ಪರಿಸರ ಮಾರಕ ಯೋಜನೆಗಳನ್ನು ಜಾರಿ ಮಾಡಲು ಹುನ್ನಾರ ನಡೆಯುತ್ತಿದೆ. ಈಗ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಯೋಜನೆಯ ಚರ್ಚೆಯಾಗುತ್ತಿರುವುದು ದುರದೃಷ್ಟಕರ. ಮೊದಲು ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಲಿ ಎಂದು ಆಗ್ರಹಿಸಿದರು.
"
ರಾಜ್ಯ ಸರ್ಕಾರದಿಂದ ಶಿವಮೊಗ್ಗ ಏರ್‌ಪೋರ್ಟ್ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಏರ್‌ಪೋರ್ಟ್ ಪ್ರಾಧಿಕಾರಕ್ಕೆ ವಹಿಸಲಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಆ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಿದ್ದು ರಾಜ್ಯ ಸರ್ಕಾರ ಎಂಬುದನ್ನು ರಾಘವೇಂದ್ರ ಅರ್ಥ ಮಾಡಿಕೊಳ್ಳಲಿ. ಇನ್ನು ಎರಡು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಆಗಲಿದೆ.
— ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ