ಹೊಸನಗರದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಮಾಡಿಸಲು ಸಾರ್ವಜನಿಕರು ಅಂಚೆ ಕಚೇರಿ ಎದುರು ಸರದಿ ಸಾಲಿನಲ್ಲಿ ನಿಂತಿರುವುದು.
ಹೊಸನಗರ: ಕಳೆದ ಕೆಲವು ತಿಂಗಳುಗಳಿಂದ ತಾಲೂಕು ಕಚೇರಿಯಲ್ಲಿ ಆಧಾರ್ ನೋಂದಣಿ ಕೇಂದ್ರ ಸ್ಥಗಿತಗೊಂಡಿದೆ. ಇದರಿಂದ ಆಧಾರ್ ತಿದ್ದುಪಡಿ, ಹೊಸ ನೋಂದಣಿ ಮಾಡಿಸುವ ಸಾರ್ವಜನಿಕರು ಪರದಾಡುವಂತಾಗಿದೆ.
ಯಡೂರು, ನಿಟ್ಟೂರು, ಸಂಪೇಕಟ್ಟೆ ಮಾಸ್ತಿಕಟ್ಟೆ, ಹುಲಿಕಲ್ ಮತ್ತಿತರ ದೂರದ ಊರುಗಳಿಂದ ಹೊಸನಗರ ಕೇಂದ್ರಕ್ಕೆ ಬಂದು ಆಧಾರ್ ಕೇಂದ್ರ ಬಂದ್ ಆಗಿರುವುದನ್ನು ನೋಡಿ ಬೇಸರದಿಂದ ವಾಪಸ್ ಹೋಗುತ್ತಿದ್ದಾರೆ. ಹೊಸನಗರ ಮತ್ತು ಸುತ್ತಮುತ್ತ ಎಲ್ಲಿಯೂ ಆಧಾರ್ ಕೇಂದ್ರ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗಿದೆ. ಹೊಸನಗರದ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ತಿದ್ದುಪಡಿ ಮಾಡುತ್ತಿದ್ದು, ಇಲ್ಲಿಯೂ ಕೂಡ ದಿನಕ್ಕೆ ಕೇವಲ 25 ಜನರಿಗೆ ಅವಕಾಶವಿರುತ್ತದೆ. ಆದರೆ ಪ್ರತಿದಿನ ಮುಂಜಾನೆ 5.30ರಿಂದಲೇ 150-200 ಜನರು, ಮಹಿಳೆಯರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.
ಬಿಜೆಪಿ ಮನವಿ: ತಾಲೂಕು ಕೇಂದ್ರದಲ್ಲಿ ಕೂಡಲೇ ಆಧಾರ್ ಕೇಂದ್ರ ತೆರೆಯಬೇಕು. ಎಲ್ಲ ಕಾರ್ಯನಿರತ ದಿನಗಳಲ್ಲಿ ಸಾರ್ವಜನಿಕರಿಗೆ ಆಧಾರ್ ಸೇವೆ ಒದಗಿಸಬೇಕು ಎಂದು ಬಿಜೆಪಿ ತಾಲೂಕು ಘಟಕ ಆಗ್ರಹಿಸಿದೆ. ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡುತ್ತೇವೆ ಎಂದು ಮುಖಂಡರು ಎಚ್ಚರಿಸಿದ್ದಾರೆ. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಭರತ್‌ರಾಜ್‌ಗೆ ಮನವಿ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಎನ್.ಆರ್.ದೇವಾನಂದ್, ಶ್ರೀಪತಿ ರಾವ್ ಇತರರಿದ್ದರು.