ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಜನ್ಮದಿನ ಪ್ರಯುಕ್ತ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರೃ ಹೋರಾಟಗಾರರ ಕುಟುಂಬದವರಿಗೆ ಗೌರವಿಸಲಾಯಿತು. ಡಾ. ಜ್ಞಾನೇಶ್, ರಾಜು ಎಂ.ತಲ್ಲೂರು ಇತರರಿದ್ದರು.
ಆನವಟ್ಟಿ: ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ದೇಶಕ್ಕಾಗಿ ಬಲಿದಾನ ನೀಡುವುದರ ಮೂಲಕ ಸ್ವಾತಂತ್ರೃ ದೊರಕಿಸಿದರು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಆನವಟ್ಟಿಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಜನ್ಮದಿನದ ಪ್ರಯುಕ್ತ ಡಾ. ಜ್ಞಾನೇಶ್ ಸ್ನೇಹ ಬಳಗ, ಸಾಗರದ ರೋಟರಿ, ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಸ್ವಾತಂತ್ರೃ ಹೋರಾಟಗಾರ ಕುಟುಂಬದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರೃ ನಂತರದ ಭಾರತದಲ್ಲಿ ಹಿಂದಿನ ಸರ್ಕಾರಗಳಿಗಿಂತ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಯುತ್ತಿದೆ. ರಾಜಕೀಯದಲ್ಲಿ ಅಧಿಕಾರ ಎಂದಿಗೂ ಶಾಶ್ವತವಲ್ಲ. ಅವಕಾಶ ಇದ್ದಾಗ ಜನಪರ ಕೆಲಸಗಳನ್ನು ಮಾಡುವವನೇ ನಿಜವಾದ ನಾಯಕ ಎಂದು ತಿಳಿಸಿದರು.
ಡಾ. ಜ್ಞಾನೇಶ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ. ಒಬ್ಬರು ನೀಡುವ ರಕ್ತ ಇನ್ನೊಬ್ಬರ ಜೀವ ಉಳಿಸಲು ನೆರವಾಗುತ್ತದೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು. ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗುತ್ತಿದೆ ಎಂದರು. ಸ್ವಾತಂತ್ರೃಕ್ಕಾಗಿ ಹೋರಾಡಿದ ಕುಟುಂಬಸ್ಥರಿಗೆ ಗೌರವಿಸಲಾಯಿತು. ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಮೂಡಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪದ್ಮನಾಭ ಭಟ್, ಮಡಿವಾಳ ಮಾಚಿದೇವ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ.ತಲ್ಲೂರು, ಮಧುರಾಯ್ ಜಿ.ಶೇಟ್, ವಿನಯ್ ಶೆರ್ವಿ, ಕೊಟ್ರೇಶ್ ಸ್ವಾಮಿ, ಪಾಣಿ ರಾಜಪ್ಪ, ಶಿವರಾಜ್, ಸುಧಾ ಶಿವಪ್ರಸಾದ್, ಭರ್ಮಪ್ಪ ಗೌಡ ಇತರರಿದ್ದರು.