ಸಾಗರ ಮಾರಿಕಾಂಬೆ ದೇಗುಲ ಸಮಿತಿ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ದೇವಾಲಯದ ಬಳಿ ಆಗಮಿಸಿದ್ದ ಹಿತರಕ್ಷಣಾ ಸಮಿತಿ ಪ್ರಮುಖರು. ಎಂ.ಡಿ.ಆನಂದ್, ಆರ್.ಶ್ರೀನಿವಾಸ್, ಮಂಜುನಾಥ್, ಶ್ರೀನಾಥ್ ಇತರರಿದ್ದರು. 
ಶಿವಮೊಗ್ಗ

ಪಾರದರ್ಶಕ ಆಡಳಿತ ವ್ಯವಸ್ಥೆಗೆ ಆದ್ಯತೆ | election

ಶಿವಕುಮಾರ ಎಸ್.ಪಿ.
ಸಾಗರ: ಮಾರಿಕಾಂಬಾ ದೇವಸ್ಥಾನದಲ್ಲಿ ಉತ್ತಮ ಆಡಳಿತ ತರಬೇಕು ಎನ್ನುವ ಉದ್ದೇಶದಿಂದ ಹಿತರಕ್ಷಣಾ ಸಮಿತಿ ಚುನಾವಣೆ ಕಣಕ್ಕೆ ಇಳಿದಿದೆ ಎಂದು ಸಾಗರ ಮಾರಿಕಾಂಬಾ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ತಿಳಿಸಿದರು.
ಮಾ. 8ರಂದು ನಡೆಯಲಿರುವ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಸಾಗರ ಮಾರಿಕಾಂಬಾ ದೇವಸ್ಥಾನದ ಬಳಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯಿಂದ ನಾಮಪತ್ರ ಸಲ್ಲಿಸಿ ಮಾತನಾಡಿದರು.
ಫೆ.3ರಿಂದ 11ರವರೆಗೆ ನಡೆದ ಜಾತ್ರೆ ಬಗ್ಗೆ ಸಾರ್ವಜನಿಕರಿಂದ ದೊಡ್ಡ ಮಟ್ಟದ ಆಕ್ಷೇಪ ಕೇಳಿ ಬಂದಿದೆ. ಸಮಿತಿ ಇನ್ನಷ್ಟು ಜನಮುಖಿಯಾಗಿ ಜಾತ್ರೆ ಮಾಡಲು ಎಲ್ಲ ಅವಕಾಶ ಇತ್ತು. ಆದರೆ ಅಧಿಕಾರಿಗಳ ಕೈಗೆ ಕೀಲಿಕೈ ಕೊಟ್ಟಂತೆ ಸಮಿತಿ ವರ್ತಿಸಿದ್ದು ಬೇಸರ ಸಂಗತಿ. ಈ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು, ದೇವಸ್ಥಾನದ ಸಮಗ್ರ ಅಭಿವೃದ್ಧಿ ಪರಿಕಲ್ಪನೆ ಇರಿಸಿಕೊಂಡು ನಮ್ಮ ತಂಡ ಸ್ಪರ್ಧೆ ಮಾಡಿದೆ ಎಂದು ಹೇಳಿದರು.
ಐದು ಜಾತ್ರೆ ನಡೆಸಿದರೂ ಹಾಲಿ ಸಮಿತಿ ಮತ್ತೊಮ್ಮೆ ಚುನಾವಣೆ ಕಣಕ್ಕೆ ಇಳಿದಿರುವುದು ನಿಜಕ್ಕೂ ಬೇಸರ ತರಿಸುತ್ತದೆ. ನಮ್ಮ ಸಮಿತಿಯಲ್ಲಿ ಎಲ್ಲರೂ ಉತ್ಸಾಹಿಗಳಿದ್ದು ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. 35 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ ಎಂದರು.
ಆರ್.ಶ್ರೀನಿವಾಸ್, ಶ್ರೀನಾಥ್, ಮಂಜುನಾಥ್, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ, ಗುರುಬಸನಗೌಡ, ಧರ್ಮರಾಜ್, ರಾಮಪ್ಪ, ನಂಜುಂಡಸ್ವಾಮಿ ಇತರರಿದ್ದರು.