ಸಾಗರದಲ್ಲಿ ಆಯೋಜಿಸಿದ್ದ ನಾ. ಡಿಸೋಜ ಸ್ಮರಣೆ ಕಾರ್ಯಕ್ರಮದಲ್ಲಿ ಶಿವಾನಂದ ಕುಗ್ವೆ, ಬಿ.ಆರ್.ವಿಜಯವಾಮನ್, ನವೀನ್ ಡಿಸೋಜ, ಫಿಲೊಮಿನಾ ಡಿಸೋಜ ಇತರರಿದ್ದರು.
ಸಾಗರ: ಮಲೆನಾಡಿನ ಹಬ್ಬ, ಸಾಂಪ್ರದಾಯಿಕ ಆಚರಣೆ, ಹಸೆ, ಚಿತ್ತಾರದಂತಹ ಅಮೂಲ್ಯ ವಿಚಾರಗಳ ಕುರಿತು ಅಧ್ಯಯನ ನಡೆಸಿ ದಾಖಲಿಸುವ ಕೆಲಸವನ್ನು ಸಾಹಿತಿ ನಾ.ಡಿಸೋಜ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಹೇಳಿದರು.
ಸಾಗರದಲ್ಲಿ ಆಯೋಜಿಸಿದ್ದ ನಾ.ಡಿಸೋಜ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಳುಗಡೆ ಸಂತ್ರಸ್ತರ ಜೀವನ ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಅವರ ಅಧ್ಯಯನ, ಕ್ರಿಯಾಶೀಲ ಗುಣ ಯುವ ಬರಹಗಾರರಿಗೆ ಮಾರ್ಗದರ್ಶಿ. ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿರುವ ನಾ. ಡಿಸೋಜ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಮಾತನಾಡಿ, ಮಲೆನಾಡಿನ ಅನೇಕ ಪರಿಸರ ಹೋರಾಟಗಳಲ್ಲಿ ನಾ. ಡಿಸೋಜ ವರದು ಪ್ರಮುಖ ಪಾತ್ರವಿದೆ. ಸರ್ಕಾರದ ಸಹಕಾರವಿಲ್ಲದೆ ಮಲೆನಾಡಿನಲ್ಲಿ ನಡೆದ ಕೆರೆಗಳ ಅಭಿವೃದ್ಧಿಗೆ ಅವರು ಧ್ವನಿಯಾಗಿದ್ದರು ಎಂದರು.
ರಂಗಕರ್ಮಿ ಬಿ.ಆರ್.ವಿಜಯವಾಮನ್ ಮಾತನಾಡಿ, ಸಾಗರದ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ನಾ.ಡಿಸೋಜ ದೊಡ್ಡ ಶಕ್ತಿಯಾಗಿದ್ದರು. ಪರಿಸರ ಚಳವಳಿಗಳಿಗೆ ಧ್ವನಿಯಾಗಿದ್ದರು. ಸಾಗರಕ್ಕೆ ರೈಲು ಸಂಚಾರ ಸ್ಥಗಿತವಾದಾಗ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸ್ಮರಿಸಿದರು.
ಲೇಖಕ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಅಭಿವೃದ್ಧಿ ಜತೆಗೆ ಬರುವ ಆಧುನಿಕತೆ ಮನುಷ್ಯ ಸಂಬಂಧವನ್ನು ದುರ್ಬಲಗೊಳಿಸುತ್ತಿದೆ ಎಂಬ ಬಹುಮುಖ್ಯ ಸಂಗತಿಯನ್ನು ಕಥೆಗಳ ಮೂಲಕ ತೆರೆದಿಟ್ಟಿದ್ದರು ಎಂದರು. ಸುವ್ವಿ ಪ್ರಕಾಶನದ ಸುನಿಲ್‌ಕುಮಾರ್, ಫಿಲೊಮಿನಾ ಡಿಸೋಜ, ಫ್ರಾಂಕ್ಲಿನ್ ಫರ್ಟಾಡೋ, ನವೀನ್ ಡಿಸೋಜ, ರೇಷ್ಮಾ ಡಿಸೋಜ, ಶೋಭಾ ನರೇಶ್ ಇತರರಿದ್ದರು.