ಸಾಗರದಲ್ಲಿ ಸಹಕಾರ ಇಲಾಖೆಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಸಿ.ಹನುಂತಪ್ಪ, ಬಿ.ಎಂ.ಅಮೃತೇಶ್ವರ, ಸತೀಶ್‌ಕುಮಾರ್ ಇತರರಿದ್ದರು.
ಸಾಗರ: ಸಹಕಾರ ಕ್ಷೇತ್ರ ನಂಬಿಕೆ ಮೇಲೆ ನಡೆಯುತ್ತಿದೆ. ಜನಸಾಮಾನ್ಯರಿಗೆ ಉಪಕಾರ ಮಾಡಬೇಕೇ ವಿನಃ ಭ್ರಷ್ಟಾಚಾರ ನಡೆಸಿ ತೊಂದರೆ ಕೊಡಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್, ಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆಯಿಂದ ಪಿಎಸಿಎಸ್‌ಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ಸಿಇಒಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಣ ಮಾಡುವ ಉದ್ದೇಶವಿದ್ದರೆ ಸಹಕಾರ ಸಂಘಕ್ಕೆ ಬರಬೇಡಿ. ಸೇವೆ ಮಾಡುವ ಮನಸ್ಸಿದ್ದವರಿಗೆ ಸಹಕಾರ ಕ್ಷೇತ್ರ ಪೂರಕ. ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಕೆಲಸ ಮಾಡಿದಾಗ ಜನರಿಗೆ ಕೊಡುಗೆ ನೀಡಲು ಸಾಧ್ಯ. ತಾಲೂಕಿನಲ್ಲಿ ಕಲ್ಮನೆ ಹೊರತುಪಡಿಸಿ ಉಳಿದ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಕಲ್ಮನೆ ಸೊಸೈಟಿಯನ್ನು ಸರಿದಾರಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಹಕಾರ ಕ್ಷೇತ್ರ ಗ್ರಾಮೀಣ ಭಾಗದ ಆರ್ಥಿಕ ಚೈತನ್ಯ ಕಾಪಾಡಿಕೊಂಡು ಬರುತ್ತಿದೆ. ಸಾಲ ವಸೂಲಾತಿ, ಸೌಲಭ್ಯ ಕಲ್ಪಿಸಲು ಹೆಚ್ಚು ಪೂರಕವಾಗಿದೆ. ಹಣಕಾಸು ದುರ್ಬಳಕೆ ಆಗದಂತೆ ಸದಸ್ಯರ ಹಿತ ಕಾಯುವ ಕುರಿತು ಮಾಹಿತಿ ಕಾರ್ಯಾಗಾರದ ಮೂಲಕ ಅರಿತುಕೊಳ್ಳಲು ಸಾಧ್ಯವಿದೆ ಎಂದರು.
ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಸಿ.ಹನುಮಂತಪ್ಪ ಮಾತನಾಡಿ, ವರ್ಷಕ್ಕೆ 8ಕ್ಕೂ ಹೆಚ್ಚು ತರಬೇತಿ ಆಯೋಜಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ವ್ಯವಹರಿಸುವ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಸಹಕಾರಿ ಯೂನಿಯನ್ ಉಪಾಧ್ಯಕ್ಷ ಬಿ.ಎಂ.ಅಮೃತೇಶ್ವರ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸತೀಶ್‌ಕುಮಾರ್, ಸುನಂದಾ, ಯಶವಂತಕುಮಾರ್, ದಿನೇಶ್, ಮಾರುತಿ, ಸಂತೋಷಕುಮಾರ್ ಇತರರಿದ್ದರು.