ಸೊರಬದ ಕಾನುಕೇರಿ ಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರೇಖಾ ಜಗದೀಶ್, ಮಂಜುನಾಥ್ ಇದ್ದರು. 
ಶಿವಮೊಗ್ಗ

ಶ್ರಾವಣ ಮಾಸದಲ್ಲಿ ಹಬ್ಬಗಳ ಸಾಲು

ಸೊರಬ: ಸಮಾಜದಲ್ಲಿ ಹಬ್ಬಗಳು ಅಜ್ಞಾನದ ಅಂಧಕಾರ ಹೋಗಲಾಡಿಸಿ ವೈಚಾರಿಕ ಪ್ರಜ್ಞೆ ಮೂಡಿಸುತ್ತವೆ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾನುಕೇರಿ ಮಠದಲ್ಲಿ ನಾಗರ ಅಮಾವಾಸ್ಯೆ ಅಂಗವಾಗಿ ಆಯೋಜಿಸಿದ್ದ 146ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರಾವಣ ಮಾಸ ಹಬ್ಬಗಳ ಪರ್ವ. ಆತ್ಮ ಸಾಕ್ಷಾತ್ಕಾರ ಮಾಡುವುದು ಹಬ್ಬಗಳ ಮೂಲ ಉದ್ದೇಶ. ಅಂತರಂಗದ ಬೆಳಕು ನೀಡುವ ಶಕ್ತಿ ದೇವರಿಗಿದೆ ಎಂದು ತಿಳಿಸಿದರು.
ಆಚರಣೆಗಳು ಮೌಢ್ಯ ಉಂಟು ಮಾಡಬಾರದು. ಅವು ವೈಚಾರಿಕ ಪ್ರಜ್ಞೆ ನೀಡುವಂತಿರಬೇಕು. ಬಹಿರಂಗ ಆಸೆ, ಆಕಾಂಕ್ಷೆಗಳಿಗೆ ಮನಸ್ಸು ಹರಿಬಿಡದೆ ಭಕ್ತಿ ಕಡೆಗೆ ಮನಸ್ಸು ಕೇಂದ್ರೀಕರಿಸಿಕೊಳ್ಳಬೇಕು. ಮಕ್ಕಳ ಮೇಲೆ ಪ್ರೀತಿ ಇರುವ ಜತೆಗೆ ಅವರಿಗೆ ಸಂಸ್ಕಾರ ನೀಡಬೇಕು ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್ ಮಾತನಾಡಿ, ಶ್ರಾವಣ ಮಾಸ ವಿಶೇಷವಾದದ್ದು. ಇಷ್ಟಲಿಂಗ ಪೂಜೆಯಿಂದ ಇಷ್ಟಾರ್ಥಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.
ರುದ್ರಾಭಿಷೇಕ, ಚೌಡೇಶ್ವರಿ ದೇವಿಗೆ ಪೂಜೆ ಮತ್ತು ಉಡಿ ತುಂಬುವ ಕಾರ್ಯ ನಡೆಯಿತು. ಟೌನ್ ವೀರಶೈವ ಸಮಾಜದ ನೂತನ ಅಧ್ಯಕ್ಷ ಮಂಜುನಾಥ್ ಹೊಸಕೊಪ್ಪ ಇದ್ದರು.