ಶಿಕಾರಿಪುರದ ಜೈನ ಮಂದಿರದಲ್ಲಿ ಶ್ರೀ ದೈವಜ್ಞ ಬ್ರಾಹ್ಮಣ ಸಮಾಜ ಸಂಘದಿಂದ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ, ಶ್ರೀ ಸುಜ್ಞಾನೇಶ್ವರ ಸ್ವಾಮೀಜಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಇತರರಿದ್ದರು. 
ಶಿವಮೊಗ್ಗ

ಭಗವಂತನ ಚಿಂತನೆಯಿಂದ ಪರಿಶುದ್ಧ ಮನಸು ನಿರ್ಮಾಣ

ಶಿಕಾರಿಪುರ: ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಸದಾಕಾಲ ಧರ್ಮ ನಮಗೆ ನೆರಳಾಗಿ ಕಾಯುತ್ತದೆ. ಧರ್ಮಮಾರ್ಗ ಎಂದರೆ ರಾಜಪಥ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ ಹೇಳಿದರು.
ಜೈನ ಮಂದಿರದಲ್ಲಿ ಶ್ರೀ ದೈವಜ್ಞ ಬ್ರಾಹ್ಮಣ ಸಮಾಜ ಸಂಘದಿಂದ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದಿನೇದಿನೆ ವಿಚ್ಛಿದ್ರಕಾರಿ ಮನಸುಗಳು ಹೆಚ್ಚಾಗುತ್ತಿವೆ. ಪರಿಶುದ್ಧ ಮನಸು ನಿರ್ಮಾಣ ಆಗಬೇಕಾದರೆ ದೈವ ಚಿಂತನೆಯಿಂದ ಸಾಧ್ಯ. ಧರ್ಮ ಮಾರ್ಗದಲ್ಲಿ ಸದ್ವಿಚಾರ, ಸಹನೆ, ಶಾಂತಿ, ಸಂಯಮ ಕಲಿಯಬಹುದಾಗಿದೆ ಎಂದು ತಿಳಿಸಿದರು.
ಮನುಕುಲದ ಒಳಿತಿಗಾಗಿ ಮಠಗಳು ಕೆಲಸ ಮಾಡುತ್ತಿವೆ. ಅನಾದಿ ಕಾಲದಿಂದಲೂ ಗುರು ಪರಂಪರೆ ಸಮಾಜದ ಉನ್ನತಿಗಾಗಿ ಮಾರ್ಗದರ್ಶನ ಮಾಡುತ್ತಿದೆ. ಧರ್ಮದ ಸುಗಂಧವನ್ನು ಹರಡುವುದು ಗುರುವಿನ ಕಾಯಕ. ದೈವಜ್ಞ ಸಮಾಜ ನಿರಂತರ ಧರ್ಮೋತ್ಥಾನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮ್ಮ ಧರ್ಮ ಆಚರಿಸಿ ಎಲ್ಲ ಧರ್ಮ ಗೌರವಿಸಿ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಧರ್ಮೋತ್ಥಾನ ಕಾರ್ಯದಲ್ಲಿ ಗುರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಧರ್ಮ ಕಾರ್ಯಗಳನ್ನು ಮಾಡಿದಾಗ ಅಥವಾ ಅವುಗಳಲ್ಲಿ ಪಾಲ್ಗೊಂಡಾಗ ನಮಗೆ ವಿಶೇಷ ಅನುಭವ ಸಿಗುತ್ತದೆ ಎಂದು ಹೇಳಿದರು.
ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ, ಶ್ರೀ ಸುಜ್ಞಾನೇಶ್ವರ ಸ್ವಾಮೀಜಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ದೈವಜ್ಞ ಸಮಾಜದ ರಾಜ್‌ಕುಮಾರ್, ಶ್ರೀಧರ್ ಕರ್ಕಿ, ಶಿವಾನಂದ ಸಾನು, ಸದಾನಂದ ರಾಯ್ಕರ್, ರಮೇಶ್, ಗೋಪಿ, ಭಾಗ್ಯಾ ರಾಯ್ಕರ್ ಇತರರಿದ್ದರು.
ಸನಾತನ ಧರ್ಮ ನಮಗೆ ನೀಡಿದ ಸಂಸ್ಕಾರವನ್ನು ನಾವು ಎಂದಿಗೂ ಮರೆಯಬಾರದು. ದೈನಂದಿನ ಅನುಷ್ಠಾನ, ಸಂಪ್ರದಾಯ, ಸದಾಚಾರ ಮರೆಯಬಾರದು. ಮುಂದಿನ ಪೀಳಿಗೆಗೆ ನಮ್ಮ ಆಚಾರ-ವಿಚಾರ ಮತ್ತು ಪರಂಪರೆ ಪರಿಚಯಿಸುವ ಕೆಲಸ ಆಗಬೇಕು.
ಶ್ರೀ ಸುಜ್ಞಾನೇಶ್ವರ ಶ್ರೀಗಳು