ಹಚ್ಚ ಹಸಿರು, ಸುಣ್ಣ-ಬಣ್ಣದಿಂದ ಕಂಗೊಳಿಸುತ್ತಿರುವ ಶಿವಮೊಗ್ಗ ಬಿಇಒ ಕಚೇರಿ. 
ಶಿವಮೊಗ್ಗ

ಬಿಇಒ ಕಚೇರಿಗೆ ಹೊಸ ಸ್ಪರ್ಶ | BEO Office

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿರುವ ಕಟ್ಟಡಕ್ಕೆ ಸುಣ್ಣ-ಬಣ್ಣ
  • ನೌಕರರು ಮತ್ತು ಸಿಬ್ಬಂದಿಯ ಶ್ರಮಕ್ಕೆ ಫಲ
  • ಬಣ್ಣ ಮಾಸಿದ ಗೋಡೆಗಳಿಗೆ ಮರುಜೀವ
  • 30 ವರ್ಷಗಳ ನಂತರ ಪೇಂಟಿಂಗ್
ಶಿವಮೊಗ್ಗ: ಸಂಘಟನೆ ಬಲವಿದ್ದು, ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಶಿವಮೊಗ್ಗದ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ(BEO)) ಕಚೇರಿ ಸಾಕ್ಷಿಯಾಗಿದೆ. ಕಳೆದ 30 ವರ್ಷಗಳಿಂದ ಸುಣ್ಣ-ಬಣ್ಣವನ್ನೇ ಕಾಣದ ಕಚೇರಿಗೆ ಅಲ್ಲಿನ ನೌಕರರು ಮತ್ತು ಸಿಬ್ಬಂದಿಯ ಶ್ರಮದಿಂದ ಹೊಸ ಸ್ಪರ್ಶ ಸಿಕ್ಕಿದೆ.
ನಗರದ ಮೀನಾಕ್ಷಿ ಭವನ(Meenakshi Bhavan)ದ ಸಮೀಪ ಇರುವ ಶಿವಮೊಗ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಲವು ವರ್ಷಗಳ ಕಾಲ ಹಾಳು ಸುರಿಯುತ್ತಿತ್ತು. ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿಗಳು ಕೆಲಸದ ನಿಮಿತ್ತ ಬರುತ್ತಿದ್ದ ಶಿಕ್ಷಕ ಸಮೂಹವನ್ನು ಸ್ವಾಗತಿಸುತ್ತಿದ್ದವು. ಶೌಚಗೃಹವೂ ಅವ್ಯವಸ್ಥೆಯಿಂದ ಕೂಡಿತ್ತು. ಮೂರು ದಶಕಗಳಿಂದ ಆಗದ ಕೆಲಸ ಕೆಲವೇ ದಿನಗಳಲ್ಲಿ ಸಾಧ್ಯವಾಗಿದ್ದು, ಇದೀಗ ಬಿಇಒ, ಬಿಆರ್‌ಸಿ(BRC), ಪುಸ್ತಕ ಗೋದಾಮು ಕಟ್ಟಡ(Book warehouse building)ಗಳು ಸುಣ್ಣ-ಬಣ್ಣದೊಂದಿಗೆ ಕಂಗೊಳಿಸುತ್ತಿವೆ.
ರಾಜ್ಯ ಸರ್ಕಾರ(State Government)ದ ನಯಾಪೈಸೆ ಅನುದಾನವಿಲ್ಲದೆ ಬಿಆರ್‌ಸಿಗಳು, ನೌಕರರು, ಶಿಕ್ಷಕರು ಹಾಗೂ ಸಿಬ್ಬಂದಿಯೇ ಕಚೇರಿಗೆ ಹೊಸ ರೂಪ ನೀಡಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಡಗಳಿಗೆ ಹೊಸ ಸ್ವರೂಪ ನೀಡಿದ್ದಾರೆ. ಕಚೇರಿಗೆ ಬರುವ ಶಿಕ್ಷಕರು, ಸಿಬ್ಬಂದಿಗೆ ಕುಳಿತುಕೊಳ್ಳುವ ಆಸನಗಳಿಂದ ಹಿಡಿದು ಶೌಚಗೃಹ(Toilet)ದ ದುರಸ್ತಿಯೂ ಆಗಿರುವುದು ವಿಶೇಷ. 
ಹಚ್ಚ ಹಸಿರಿನ ಲಾನ್: ಬಿಇಒ ಕಚೇರಿ(BEO Office)ಗೆ ಹೊಂದಿಕೊಂಡು ಪಾಳುಬಿದ್ದಿದ್ದ ಕಟ್ಟಡವನ್ನು ನೆಲಸಮಗೊಳಿಸಿ ಲಕ್ಷಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಲಾನ್ ಮಾಡಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಲಾನ್ ನಡುವೆ ಸರ್ವಪಲ್ಲಿ ರಾಧಾಕೃಷ್ಣನ್ ಪ್ರತಿಮೆ(Sarvepalli Radhakrishnan statue) ಹಾಗೂ ಧ್ವಜಸ್ತಂಬ ಸ್ಥಾಪಿಸಲಾಗಿದೆ. ಲಾನ್‌ಗೆ ಸ್ಪಿಂಕ್ಲರ್ ನೀರಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಜತೆಗೆ ಹೂವಿನ ಕುಂಡಗಳನ್ನು ನಿರ್ಮಿಸಿ ಸಾವಿರಾರು ರೂ. ಖರ್ಚು ಮಾಡಿ ನಾನಾ ಬಗೆಯ ಹೂವಿನ ಗಿಡ, ಶೋಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
"

ಶಿವಮೊಗ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ಬಿಇಒ ಕಚೇರಿ ಹಾಗೂ ಆವರಣವನ್ನು ನವೀಕರಣಗೊಳಿಸುವ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ. ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರನ್ನು ಪ್ರೋತ್ಸಾಹಿಸಿ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ.

— ವೈ.ಎಂ.ಧರ್ಮಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ

ಚಿತ್ರಕಲಾ ಶಿಕ್ಷಕರ ಕೊಡುಗೆ

ನಮ್ಮ ಕಚೇರಿ ನಮ್ಮ ಜವಾಬ್ದಾರಿ ಕಲ್ಪನೆಯಡಿ ಬಿಇಒ ಕಚೇರಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಭದ್ರತಾ ಗೋಡೆಗಳು, ಕಟ್ಟಡಗಳ ಗೋಡೆಗಳಿಗೆ ನಾಲ್ಕು ಬಾರಿ ಸುಣ್ಣ-ಬಣ್ಣ ಬಳಿಯಲಾಗಿದೆ. ಭದ್ರತಾ ಗೋಡೆಗಳ ಮೇಲೆ ಸಂದೇಶ ಸಾರುವ ಚಿತ್ರಗಳನ್ನು ರಚಿಸಲಾಗಿದೆ. ಗೋಡೆಗಳ ಮೇಲೆ ಆಯಿಲ್ ಪೇಂಟ್‌ನಿಂದ ಬಿಡಿಸಿರುವ ಚಿತ್ರಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಯಾವುದೇ ಸಂಭಾವನೆ ಪಡೆಯದೆ ಹೊಳಲೂರಿನ ಅಶೋಕ್, ಗಾಡಿಕೊಪ್ಪದ ಸತೀಶ್, ಗುರುಪುರದ ರಾಜೇಂದ್ರ ಸೇರಿ ಆರೇಳು ಚಿತ್ರಕಲಾ ಶಿಕ್ಷಕರು(Art teachers) ಸ್ವಯಂಪ್ರೇರಿತವಾಗಿ ಬಂದು ನಾನಾ ಚಿತ್ರಗಳನ್ನು ರಚಿಸುವ ಮೂಲಕ ಗೋಡೆಗಳಿಗೂ ಜೀವ ತುಂಬುವ ಕೆಲಸ ಮಾಡಿದ್ದಾರೆ.

ಶಾಲೆಗಳ ಅಭಿವೃದ್ಧಿಗೂ ಶಿಕ್ಷಕರಿಗೆ ಸಲಹೆ

ಬಿಇಒ ಕಚೇರಿ ಮಾದರಿಯಲ್ಲೇ ಸರ್ಕಾರದ ಅನುದಾನ ನಿರೀಕ್ಷಿಸದೆ ಸ್ಥಳೀಯ ಮೂಲಗಳಿಂದ ಆದಾಯ ಸಂಗ್ರಹಿಸಿ ಅವಶ್ಯವಿರುವ ಮೂಲ ಸೌಕರ್ಯ ಕಲ್ಪಿಸಲು ಶಿಕ್ಷಕರಿಗೆ ಸಲಹೆ ನೀಡಲಾಗುತ್ತಿದೆ. ದಾನಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ನೆರವು(Assistance from SDMC members) ಪಡೆದು ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಕೊಠಡಿಗಳ ದುರಸ್ತಿ, ಭದ್ರತಾ ಗೋಡೆ ನಿರ್ಮಾಣ ಒಳಗೊಂಡಂತೆ ಅಗತ್ಯ ಕೆಲಸ ಮಾಡಿಸಿಕೊಳ್ಳಬೇಕು. ಅಲ್ಲದೆ ಸರ್ಕಾರದ ಆದೇಶದಂತೆ ಸಂವಿಧಾನ ಪೀಠಿಕೆಯನ್ನೂ ಅಳವಡಿಸಿಕೊಳ್ಳಲು ಸಲಹೆಗಳನ್ನು ನೀಡಲಾಗಿದೆ ಎನ್ನುತ್ತಾರೆ ಶಿವಮೊಗ್ಗ ಬಿಇಒ ರಮೇಶ್.
"

ನಮ್ಮ ಶಾಲೆ ನಮ್ಮ ಜವಾಬ್ದಾರಿ ಮಾದರಿಯಂತೆ ‘ನಮ್ಮ ಕಚೇರಿ ನಮ್ಮ ಜವಾಬ್ದಾರಿ’ ಕಲ್ಪನೆಯಡಿ ಬಿಇಒ ಕಚೇರಿಯನ್ನು ಅಂದಗಾಣಿಸುವ ಕೆಲಸ ಮಾಡಲಾಗಿದೆ. ಶೌಚಗೃಹವೇ ಇರಲಿಲ್ಲ. ಮಹಾನಗರ ಪಾಲಿಕೆ ಸಹಯೋಗದಲ್ಲಿ ಆ ಕಾರ್ಯವೂ ಆಗಿದೆ. ಸಿಆರ್‌ಪಿ, ಬಿಆರ್‌ಪಿಗಳು ಹಾಗೂ ಸಿಬ್ಬಂದಿ ಮುತುವರ್ಜಿ ವಹಿಸಿ ಕಚೇರಿಗೆ ಹೊಸ ಸ್ಪರ್ಶ ನೀಡಿದ್ದಾರೆ.

— ರಮೇಶ್, ಶಿವಮೊಗ್ಗ ಬಿಇಒ