ಆರ್.ಪ್ರಸನ್ನಕುಮಾರ್ 
ಶಿವಮೊಗ್ಗ

ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನಿರೀಕ್ಷೆ | Cabinet expansion

ಸಾಗರ: ಎರಡ್ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಮೂವರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡುವ ನಿರೀಕ್ಷೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸಭೆ ನಡೆಯದೆ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದರು.
ದೇಶದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೋರಾಟ ಆರಂಭವಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮೊದಲು ಜಾಗೃತಿ ಮೂಡಿಸಿದ್ದು ಕಾಂಗ್ರೆಸ್. ನವದೆಹಲಿಯಿಂದ ಹಿಡಿದು ಹೋಬಳಿ ಮಟ್ಟದವರೆಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ರಾಹುಲ್ ಗಾಂಧಿ ಪ್ರವೇಶದ ನಂತರ ಹೋರಾಟದ ಸ್ವರೂಪ ಬದಲಾಯಿತು. ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತೆಗೆದುಕೊಂಡಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ, ಪ್ರತಿಭಟನೆ ಸಹಜ. ಆದರೆ ಪಕ್ಷದ ಕಚೇರಿಗಳಿಗೆ ನುಗ್ಗುವ ಪ್ರವೃತ್ತಿ ಸರಿಯಲ್ಲ. ರಾಹುಲ್ ಗಾಂಧಿ ಅವರ ಬಂಧನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಬಿಜೆಪಿಯವರು ಕಾಂಗ್ರೆಸ್ ಕಚೇರಿಗೆ ನುಗ್ಗಿದ್ದರು. ಆದ್ದರಿಂದ ನಮ್ಮ ಕೆಲವು ಕಾರ್ಯಕರ್ತರು ಬಿಜೆಪಿ ಕಚೇರಿಗೆ ನುಗ್ಗಿದ್ದಾರೆ. ಯಾರೇ ಆಗಲಿ ಪಕ್ಷದ ಕಚೇರಿಗೆ ನುಗ್ಗುವುದು ಸರಿಯಲ್ಲ. ಪಕ್ಷದ ಕಚೇರಿಗೆ ನುಗ್ಗಿ ಅವಾಂತರ ಸೃಷ್ಟಿಸುವುದನ್ನು ನಾವು ಒಪ್ಪುವುದಿಲ್ಲ ಎಂದರು.