ಶಿವಮೊಗ್ಗ ವೀರಶೈವ ಕಲ್ಯಾಣ ಮಂಟಪದಲ್ಲಿ ಟಿ.ವಿ.ಈಶ್ವರಯ್ಯ ಅವರ ಗುರುಲಿಂಗ ಜಂಗಮಾರಾಧನೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
- ರಂಭಾಪುರಿ ಪೀಠದೊಂದಿಗೆ ಟಿ.ವಿ.ಈಶ್ವರಯ್ಯ ಅವಿನಾಭಾವ ಸಂಬಂಧ
- ಜಂಗಮ ಸಮಾಜದ ಈಶ್ವರಯ್ಯ ಅವರ ಗುರುಲಿಂಗ ಜಂಗಮಾರಾಧನೆ
- ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಭಿಮತ
ಶಿವಮೊಗ್ಗ: ಜನನ-ಮರಣದ ನಡುವಿನ ಅವಧಿಯಲ್ಲಿ ಸಾರ್ಥಕ ಜೀವನ ನಡೆಸುವುದು ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಜಂಗಮ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಟಿ.ವಿ.ಈಶ್ವರಯ್ಯ ಅವರ ಗುರುಲಿಂಗ ಜಂಗಮಾರಾಧನೆ(Jangamaradhane)ಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಈಶ್ವರಯ್ಯ ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಕ್ರಿಯವಾಗಿ, ಸಮಾಜಮುಖಿ, ಧರ್ಮಮುಖಿಯಾಗಿ ಕಾರ್ಯನಿರ್ವಹಿಸಿದರು. ಪಂಚಪೀಠಗಳ ಅಭಿಮಾನಿಯಾಗಿ ಸಮಾಜದಲ್ಲಿ ಹಲವಾರು ರಚನಾತ್ಮಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳ ರೂವಾರಿಯಾಗಿದ್ದರು ಎಂದು ತಿಳಿಸಿದರು.
ರಂಭಾಪುರಿ ಪೀಠ(Rambhapuri Peetha)ದೊಡನೆ ಅವಿನಾಭಾವ ಸಂಬಂಧ ಹೊಂದಿದ್ದರು. ಈಶ್ವರಯ್ಯ ಸಹೋದರರು ಶಿವಮೊಗ್ಗೆಯ ಅಮೂಲ್ಯ ನಿವೇಶನವನ್ನು ರಂಭಾಪುರಿ ಪೀಠಕ್ಕೆ ನೀಡಿದ್ದನ್ನು ಮರೆಯುವಂತಿಲ್ಲ. ಈ ನಿವೇಶನದಲ್ಲಿ ಈಗಾಗಲೇ ಶ್ರೀ ರಂಭಾಪುರೀಶ ನಿವಾಸ ನಿರ್ಮಾಣಗೊಂಡಿದ್ದು, ಈಶ್ವರಯ್ಯ ಅವರ ಆಶಯದಂತೆ ಶೈಕ್ಷಣಿಕ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲಸ ನಡೆದಿದೆ. ಅವರ ಆದರ್ಶದ ದಾರಿ ಯುವಪೀಳಿಗೆಗೆ ಮಾರ್ಗದರ್ಶಿಯಾಗಿದೆ. ಅವರ ಮಾಡಿದ ಸತ್ಕಾರ್ಯ ಸಮಾಜಕ್ಕೆ ದಿಕ್ಸೂಚಿಯಾಗಿವೆ ಎಂದರು.
ಶಿವಮೊಗ್ಗ ನಗರಕ್ಕೆ ಅವರ ಸೇವೆ ಪರಿಗಣಿಸಿ ಪಾಲಿಕೆಯು ಒಂದು ಬಡಾವಣೆ ಅಥವಾ ರಸ್ತೆಗೆ ಟಿ.ವಿ.ಈಶ್ವರಯ್ಯ(T.V.Easwaraiah) ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಎನ್.ಜೆ.ವೀರಣ್ಣ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದರು.
ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮಳಲಿಮಠದ ಶ್ರೀ ನಾಗಭೂಷಣ ಸ್ವಾಮೀಜಿ, ರಟ್ಟೀಹಳ್ಳಿ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಶ್ರೀ ಶಿವಯೋಗಿ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಸ್ವಾಮೀಜಿ, ಚನ್ನಗಿರಿ ಕೇದಾರ ಶ್ರೀ ಶಿವಶಾಂತವೀರ ಸ್ವಾಮೀಜಿ, ಗೋವಿನಕೋವಿ ಶ್ರೀ ಶಿವಯೋಗಿ ಹಾಲಸ್ವಾಮಿ ಉಪಸ್ಥಿತರಿದ್ದರು. ಮಾಜಿ ಎಂಎಲ್‌ಸಿ ರುದ್ರೇಗೌಡ, ಎಸ್.ಎಸ್.ಜ್ಯೋತಿಪ್ರಕಾಶ್, ಮಹಾಲಿಂಗಶಾಸ್ತ್ರಿ, ತೇಜಸ್ವಿನಿ ರಾಘವೇಂದ್ರ, ಶಾಂತಾ ಆನಂದ, ಟಿ.ಚಂದ್ರಕಲಾ ಮತ್ತಿತರರು ಪಾಲ್ಗೊಂಡಿದ್ದರು.
ಕೃತಿ ಪ್ರಕಟಿಸಿ: ಈಶ್ವರಯ್ಯ ಅವರಲ್ಲಿದ್ದ ಜೀವನದ ಉತ್ಸಾಹ ಮಾದರಿಯಾಗಿತ್ತು. ಶಿಸ್ತಿನ ಸಿಪಾಯಿಯಾಗಿದ್ದ ಅವರು ಕೊಡುಗೈ ದಾನಿಗಳೆಂದು ಕರೆಸಿಕೊಂಡಿದ್ದರು ಎಂದು ಬಿಳಿಕಿ ಹಿರೇಮಠದ ಶ್ರೀ ರಾಚೊಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀ ರಂಭಾಪುರಿ ಪೀಠಕ್ಕೆ, ಸಿರಿಗೆರೆ ಮಠಕ್ಕೆ ಅವರು ನೀಡಿದ ಭೂದಾನ ಮರೆಯುವಂತಿಲ್ಲ ಎಂದರು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈಶ್ವರಯ್ಯ ಅವರ ಕೆಲಸ ಕಾರ್ಯಗಳನ್ನು ದಾಖಲಿಸುವ ಕೃತಿ ಹೊರಬರಲಿ ಎಂದರು.
"
ಟಿ.ವಿ.ಈಶ್ವರಯ್ಯ ಅವರು ಸಮಾಜ, ಧರ್ಮಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಅನೇಕ ಸಂಘ ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಮಾಡಿದ ಕಾರ್ಯ ನಮ್ಮೆಲ್ಲರ ನೆನಪಿನಲ್ಲಿ ಸದಾ ಉಳಿಯುತ್ತದೆ. ಪರಸ್ಪರ ಭೇಟಿ ಸಂದರ್ಭದಲ್ಲಿ ಸಾಮಾಜಿಕ ಚಿಂತನೆಗಳಿಗೆ ಮಾತ್ರ ಅವಕಾಶವಿತ್ತೇ ಹೊರತು ರಾಜಕೀಯ ಬರುತ್ತಿರಲಿಲ್ಲ.
— ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ