ಸೊರಬ ಬ್ರಹ್ಮಕುಮಾರಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಜಡೆ ಮಠದ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಸುಜಾತಕ್ಕ, ವೀಣಕ್ಕ, ಡಿ.ಶಂಕರ ಶೇಟ್, ಇ.ಎಚ್.ಮಾಲತೇಶ್, ನಾಗರಾಜ್ ಗುತ್ತಿ ಇತರರಿದ್ದರು. 
ಶಿವಮೊಗ್ಗ

ಅಜ್ಞಾನ ನಿವಾರಣೆಗೆ ಗುರು ಮಾರ್ಗದರ್ಶನ ಅವಶ್ಯ | Guru Purnima

ಸೊರಬ: ಜಗತ್ತಿನಲ್ಲಿ ಆವರಿಸಿರುವ ಭೌತಿಕ ಕತ್ತಲನ್ನು ಹೊಗಲಾಡಿಸಲು ಸೂರ್ಯನ ಬೆಳಕು ಬೇಕು. ಆದರೆ ಮನುಷ್ಯನ ಮನಸ್ಸಿನೊಳಗೆ ಅಡಗಿರುವ ಅಜ್ಞಾನದ ಕತ್ತಲೆಯನ್ನು ದೂರವಾಗಿಸಲು ಗುರುವಿನ ಮಾರ್ಗದರ್ಶನ ಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಚಿಕ್ಕಪೇಟೆ ಬ್ರಹ್ಮಕುಮಾರಿ ವಿದ್ಯಾಲಯದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಕ್ತರ ಬದುಕಿನಲ್ಲಿ ಗುರುಗಳು ಅಧ್ಯಾತ್ಮದ ಜ್ಯೋತಿಯಾಗಿ ಕಂಡು ಬರುತ್ತಾರೆ. ಮಾನವನನ್ನು ಮಹಾದೇವನನ್ನಾಗಿ ಮಾಡುವ ಶಕ್ತಿ ಗುರುಗಳಿಗೆ ಇದೆ. ಗುರು ನಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಬದುಕನ್ನು ಹೊಳೆಯುವಂತೆ ಮಾಡುತ್ತಾನೆ. ನೀನು ಯಾರು ಎಂದು ತಿಳಿಯಬೇಕು ಎಂದರೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದರು.
ಗುರು ಎಂದರೆ ಮೊಬೈಲ್ ಒಳಗಿನ ಸಿಮ್‌ಕಾರ್ಡ್ ಇದ್ದಂತೆ. ಸಿಮ್ ಇದ್ದರೆ ಫೋನ್ ಕೆಲಸ ಮಾಡುವಂತೆ ದೇಹಕ್ಕೆ ಗುರುವಿನ ಜ್ಞಾನ ದೊರೆತಾಗ ಬದುಕು ಸಾರ್ಥಕವಾಗುತ್ತದೆ. ಗುರುಗಳನ್ನು ಆರಾಧಿಸುವ ಪೂಜ್ಯ ಪರಂಪರೆ ಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಟೃವನ್ನು ಹೊಂದಿದೆ. ಈ ಗುರು ಪೂರ್ಣಿಮೆ ಸರ್ವರೂ ಆಚರಿಸುವ ಹಬ್ಬ ಎಂದು ಅಭಿಪ್ರಾಯಪಟ್ಟರು.
ಶಿರಾಳಕೊಪ್ಪ ಬ್ರಹ್ಮಕುಮಾರಿ ವಿದ್ಯಾಲಯದ ಸುಜಾತಕ್ಕ ಮಾತನಾಡಿ, ಭಾರತದ ಪರಂಪರೆಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ನಮ್ಮನ್ನು ನಾವು ಅರಿತು ನಡೆಯಬೇಕು. ನಾವು ಶಿಕ್ಷಣದ ಪಾಠ ಕಲಿತರೆ ಸಾಲದು. ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿಕೊಂಡು ನೈತಿಕ ಮೌಲ್ಯಗಳೊಂದಿಗೆ ನಡೆದಾಗ ಗುರುವಿನ ಅನುಭವ ನಮ್ಮದಾಗುತ್ತದೆ. ಗುರುವಿನ ಕೃಪೆ ಇದ್ದಾಗ ಮಾತ್ರ ನಮ್ಮ ಕರ್ಮಕ್ಕೆ ತಕ್ಕ ಫಲ ಸಿಗುತ್ತದೆ. ಹಾಗಾಗಿ ಎಲ್ಲರೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿ ಸುನೀತಾ ಪ್ರಸಾದ್ ಆನವಟ್ಟಿ, ಜಡೆ ಮಠದ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಶಂಕರ ಶೇಟ್, ಬ್ರಹ್ಮಕುಮಾರಿ ಆಶ್ರಮದ ಸಂಚಾಲಕಿ ವೀಣಕ್ಕ, ರೋಟರಿ ಕ್ಲಬ್ ಅಧ್ಯಕ್ಷ ಇ.ಎಚ್.ಮಾಲತೇಶ್, ನಾಗರಾಜ್ ಗುತ್ತಿ, ಪ್ರಸಾದ್, ಅಣ್ಣಪ್ಪ ಮಹೇಶ್ ಖಾರ್ವಿ ಇತರರಿದ್ದರು.