ಹೊರನಾಡಿನ ಆದಿಶಕ್ತಾತ್ಮಕ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಲಕ್ಷ ದೀಪೋತ್ಸವ, ಪುಷ್ಪಕ ರಥೋತ್ಸವ ನಡೆಯಿತು.
ಕಳಸ: ಹೊರನಾಡಿನ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಪುಷ್ಪಕ ರಥೋತ್ಸವ, ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೇ ವರ್ಷವೂ ಕಾರ್ತಿಕ ಮಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಶ್ರದ್ಧೆಭಕ್ತಿಯಿಂದ ಪಾಲ್ಗೊಂಡಿದ್ದರು.
ಬೆಳಗ್ಗೆ ದೇವರ ಸನ್ನಿಧಿಯಲ್ಲಿ ಕೋಟಿ ಕುಂಕುಮಾರ್ಚನೆಯನ್ನು ಜಿ.ಭೀಮೇಶ್ವರ ಜೋಷಿ ದೀಪ ಬೆಳಗುವ ಮೂಲಕ ನೆರವೇರಿತು. ಸಂಜೆ ಕ್ಷೇತ್ರದ ಧರ್ಮಕರ್ತರು ದೀಪ ಹಚ್ಚುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ನಂತರ ಪುಪ್ಷಕ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನೆರವೇರಿದವು.
ದೀಪೋತ್ಸವ ಹಿನ್ನೆಲೆಯಲ್ಲಿ ಊರನ್ನು ಸ್ವಚ್ಛಗೊಳಿಸಿ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯ ವಿದ್ಯುತ್ ದೀಪಗಳಿಂದ ಜಗಮಗಿಸುತ್ತ ಭಕ್ತರನ್ನು ಕೈಬೀಸಿ ಕರೆಯುತ್ತಿತ್ತು. ಸಂಪೂರ್ಣ ಕತ್ತಲು ಆವರಿಸುತ್ತಿದ್ದಂತೆ ಹೊರನಾಡಿನ ರಸ್ತೆ ಇಕ್ಕೆಲಗಳಲ್ಲಿ ಸಾಲು ಸಾಲು ಹಣತೆಗಳನ್ನು ಹಚ್ಚಿ ಇಡೀ ಊರನ್ನೇ ಬೆಳಗಲಾಯಿತು.
ಸ್ತುತಿ ಪಠಕರು ಸ್ತುತಿ ಘೋಷಳನ್ನು ಪಠಿಸುತ್ತಾ, ಛತ್ರಿ ಛಾಮರ, ಮಂಗಳ ವಾದ್ಯ, ಹೂವಿನ ಅಲಂಕಾರದೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬರಲಾಯಿತು. ನಂತರ ಪುಷ್ಪಕ ರಥದಲ್ಲಿ ದೇವಿ ರಥೋತ್ಸವ ನೆರವೇರಿಸಲಾಯಿತು.
ಪುಷ್ಪಕ ರಥದಲ್ಲಿ ಗ್ರಾಮ ಪ್ರದಕ್ಷಿಣೆಗೆ ತೆರಳಿದ ದೇವಿಗೆ ಮನೆ ಮನೆ ಬಾಗಿಲಲ್ಲಿ ಭಕ್ತರು ಹಣ್ಣು ಕಾಯಿ ಮಾಡಿಸಿ ತಮ್ಮ ಸಂಕಷ್ಟಗಳನ್ನು ನಿವಾರಿಸುವಂತೆ ಪ್ರಾರ್ಥಿಸುತ್ತಿದ್ದ ದಶ್ಯ ಸಾಮಾನ್ಯವಾಗಿತ್ತು. ಶ್ರೀಮಾತೆ ರಾಜಬೀದಿಯಲ್ಲಿ ಸಾಗುವಾಗ ಪಟಾಕಿ, ಸಿಡಿಮದ್ದುಗಳು, ಓಲಗಗಳು, ಕೀಲುಕುದುರೆ ಉತ್ಸವಕ್ಕೆ ಬಂದ ಭಕ್ತರನ್ನು ಮುದಗೊಳಿಸಿದವು.