ಸಾಗರದ ತವರು ಮನೆಯಲ್ಲಿ ಪ್ರತಿಷ್ಠಾಪನೆಗೊಂಡ ಮಾರಿಕಾಂಬೆ. 
ಶಿವಮೊಗ್ಗ

ಮಾರಿಕಾಂಬೆ ಜಾತ್ರೆಗೆ ಅದ್ದೂರಿ ಚಾಲನೆ | Marikaambe fair

ಸಾಗರ: ಇಲ್ಲಿನ ಶ್ರೀ ಮಾರಿಕಾಂಬಾ ದೇವಿಯ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅದ್ದೂರಿ ಚಾಲನೆ ಸಿಕ್ಕಿತು. ಬೆಳಗಿನ ಜಾವ ದೇವಿಗೆ ವಿಶೇಷ ಪೂಜೆ, ಮಾಂಗಲ್ಯಧಾರಣೆ ಶಾಸ್ತ್ರ ನೆರವೇರಿತು. ದೇವಸ್ಥಾನದ ಅರ್ಚಕ ವೃಂದ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಕೆ ನಂತರ ದರ್ಶನಕ್ಕೆ ಅವಕಾಶ ನೀಡಿದ ನಂತರ ದೇವಿ ದರ್ಶನಕ್ಕೆ ಭಕ್ತರ ನೂಗುನುಗ್ಗಲು ಉಂಟಾಯಿತು. ಸೋಮವಾರ ರಾತ್ರಿ 9ರಿಂದಲೇ ಪೂಜೆಗೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ ನಿಂತವರಿಗೆ ಮಂಗಳವಾರ ಮುಂಜಾನೆ 5 ಗಂಟೆಗೆ ದರ್ಶನವಾದರೆ, ಬೆಳಗ್ಗೆ 5ರ ನಂತರ ಬಂದವರಿಗೆ ಮಧ್ಯಾಹ್ನವಾದರೂ ದರ್ಶನ ಭಾಗ್ಯ ಸಿಗಲಿಲ್ಲ.
ಅಮ್ಮನವರ ದರ್ಶನಕ್ಕೆ ದೇವಸ್ಥಾನದಿಂದ ಜೋಗ ರಸ್ತೆಯ ಸಣ್ಣಮನೆ ಸೇತುವೆ ದಾಟಿ ಸುಮಾರು 4 ಕಿ.ಮೀ.ವರೆಗೂ ಭಕ್ತರು ಸರದಿಯಲ್ಲಿ ನಿಂತಿದ್ದರು. ಭಕ್ತರಿಗೆ ಕಾಫಿ, ಟೀ, ಕಷಾಯದ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲು ಹೆಚ್ಚಾಗುತ್ತಿದ್ದಂತೆ ಕಾರು ಚಾಲಕರು ಮತ್ತು ಮಾಲೀಕರ ಸಂಘದಿಂದ ಪಾನಕ ವ್ಯವಸ್ಥೆ ಮಾಡಲಾಗಿತ್ತು.
ಪಾಸ್ ರಾದ್ಧಾಂತ: ಆರಂಭದಲ್ಲಿ ಪಾಸ್ ವ್ಯವಸ್ಥೆ ಇಲ್ಲ ಎಂದು ಹೇಳಿದ್ದ ಸಮಿತಿಯು ಭಕ್ತರ ಒತ್ತಾಯಕ್ಕೆ ಮಣಿದು ಪಾಸ್ ವ್ಯವಸ್ಥೆ ಕಲ್ಪಿಸಿತ್ತು. 1200 ರೂ. ಕೊಟ್ಟು ದೇವಿ ದರ್ಶನಕ್ಕೆ ವಿಶೇಷ ಪಾಸ್ ಪಡೆದವರಿಗೆ ಮಧ್ಯಾಹ್ನ 2 ಗಂಟೆಯಾದರೂ ಅಮ್ಮನವರ ದರ್ಶನ ಭಾಗ್ಯ ಸಿಗಲಿಲ್ಲ. ಪಾಸ್ ಹಿಡಿದು ನಿಂತಿದ್ದ ಭಕ್ತರ ಸರದಿ ನೆಹರು ಮೈದಾನ ದಾಟಿ ಹೋಗಿತ್ತು.
ಅನ್ನದಾಸೋಹ ಮತ್ತು ದೇವಿ ದರ್ಶನಕ್ಕೆ ಸೇರಿ 2000 ರೂ. ಪಾಸ್ ಮಾಡಲಾಗಿತ್ತು. ಈ ಪಾಸ್ ಪಡೆದವರಿಗೂ ದರ್ಶನ ಸುಲಭವಾಗಿರಲಿಲ್ಲ. ದೇವಸ್ಥಾನದಿಂದ ಸೊರಬ ರಸ್ತೆಯವರೆಗೂ ಬಿಸಿಲಿನಲ್ಲೇ ನಿಲ್ಲಬೇಕಾಯಿತು. ಇದರ ಮಧ್ಯೆ ಹೆಚ್ಚು ಪಾಸ್‌ಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂತು. ಹಣ ಕೊಟ್ಟು ವಿಶೇಷ ಪೂಜೆ ಪಾಸ್ ಪಡೆದವರು ಹಾಗೂ ಬರೀ ದರ್ಶನಕ್ಕೆ ಶಿಾರಸು ಪಾಸು ಪಡೆದವರು ಇಬ್ಬರನ್ನೂ ಒಂದೇ ಸರದಿಯಲ್ಲಿ ನಿಲ್ಲಿಸಿದ್ದು ಗೊಂದಲಕ್ಕೆ ಕಾರಣವಾಯಿತು. ಶಾಸಕ ಗೋಪಾಲಕೃಷ್ಣ ಬೇಳೂರು, ಎಸಿ ವೀರೇಶ್‌ಕುಮಾರ್, ಎಎಸ್ಪಿ ಡಾ. ಬೆನಕಪ್ರಸಾದ್, ತಹಸೀಲ್ದಾರ್ ರಶ್ಮಿ ಹಾಲೇಶ್, ಮಾರಿಕಾಂಬಾ ನ್ಯಾಸ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಟಿ.ವಿ.ಪಾಂಡುರಂಗ, ರವಿನಾಯ್ಡು, ಗಂಗಾಧರ ಜಂಬಿಗೆ ಇತರರು ಸ್ಥಳದಲ್ಲಿದ್ದರು.