ಸೊರಬ ಮುರುಘಾ ಮಠದಲ್ಲಿ ಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ, ಮಠದ ನೂತನ ಕಟ್ಟಡ ಪ್ರವೇಶೋತ್ಸವದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿದರು. ಶ್ರೀ ಕುಮಾರ ಮಹಾಸ್ವಾಮೀಜಿ, ಡಿ.ಶಿವಯೋಗಿ, ರೇಖಾ ಜಗದೀಶ್, ಸಿ.ಪಿ.ಈರೇಶ ಗೌಡ ಇತರರಿದ್ದರು. 
ಶಿವಮೊಗ್ಗ

ನಿಷ್ಠಭಕ್ತರಿಗೆ ಬರಲಿದೆ ಒಳ್ಳೆಯ ದಿನ | Aniversarry

ಸೊರಬ: ಶ್ರದ್ಧಾಭಕ್ತಿಯಿಂದ ಮಾಡುವ ಕಾಯಕ ಕಷ್ಟ ಎನ್ನುವುದು ಸಹಜ. ಆದರೆ ಅಂತಹ ನಿಷ್ಠ ಭಕ್ತರಿಗೆ ಕಾಲಾನಂತರ ಒಳ್ಳೆಯ ದಿನಗಳು ಎದುರಾಗುತ್ತವೆ ಎಂದು ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಕುಮಾರಪ್ರಭು ಸ್ವಾಮಿಗಳ ಸ್ಮಾರಕ ಟ್ರಸ್ಟ್‌ನಿಂದ ಶ್ರೀ ಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನೆಯ ಹಾಗೂ ಮಠದ ನೂತನ ಕಟ್ಟಡ ಪ್ರವೇಶೋತ್ಸವದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಯಕದಿಂದ ಮಾತ್ರ ನಾವು ಪರಿಪೂರ್ಣರಾಗಲು ಸಾಧ್ಯ. ಮುರುಘಾ ಮಠದಲ್ಲಿ ಚೌಡೇಶ್ವರಿ ದೇವಿ ಜೀವಂತವಾಗಿ ಐಕ್ಯವಾಗಿರುವ ಐತಿಹ್ಯವಿದೆ. ಈ ಪ್ರಸಂಗ ಯಾವ ಭಾಗದಲ್ಲೂ ನಡೆದಿಲ್ಲ. ಲೋಕ ಅಪವಾದ ಬಂದಾಗ ತನ್ನ ಶ್ರೇಷ್ಠತೆಯನ್ನು ಮೆರೆದಿರುವ ಬಗ್ಗೆ ಇಂದಿಗೂ ಈ ಭಾಗದಲ್ಲಿ ನಂಬಿಕೆ ಇದೆ ಎಂದರು.
ಜಡೆಯ ಸಿದ್ಧವೃಷಭೇಂದ್ರ ಸ್ವಾಮೀಜಿಗಳ ಕೃಪಾಶೀರ್ವಾದಿಂದ ಬಸಪ್ಪ ಶೆಟ್ಟಿ ಅವರಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ಥಾಪನೆಗೆ ಅನುಗ್ರಹ ನೀಡಿದ ಮೇರೆಗೆ ಬಸಪ್ಪ ಶೆಟ್ಟಿ ಅವರು ಮೂರು ಸಾವಿರ ಮಠ ಸ್ಥಾಪನೆಗೆ ಮುಂದಾಗಿದ್ದರು. ಹುಬ್ಬಳ್ಳಿಯಲ್ಲಿ ಬಸಪ್ಪ ಶೆಟ್ಟಿ ಅವರ ಸಮ್ಮುಖದಲ್ಲಿ 59 ಸಾವಿರ ಜನಗಳ ಮಧ್ಯದಲ್ಲಿ ಜಡೆ ಮಠವೇ ಮೂಲ ಎನ್ನುವ ಮಾತು ಹೇಳಿದ್ದಾರೆ. ಸಿದ್ಧವೃಷಭೇಂದ್ರ ಸ್ವಾಮೀಜಿಗಳ ಕರ್ತೃತ್ವ ಶಕ್ತಿ ಹಾಗೂ ಭಕ್ತರ ಸಹಕಾರದಿಂದ ಜಡೆ ಮಠ ನಾಡಿನಲ್ಲಿ ಪ್ರಖ್ಯಾತಿ ಪಡೆದಿದೆ ಎಂದು ತಿಳಿಸಿದರು.
ಟ್ರಸ್ಟ್‌ನ ಕಾರ್ಯದರ್ಶಿ ಡಿ.ಶಿವಯೋಗಿ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ಮಧ್ಯ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿ.ಪಿ.ಈರೇಶ ಗೌಡ, ಜಯಮಾಲಾ, ಪೂರ್ಣಿಮಾ ಶಿವಯೋಗಿ, ಗಾಯತ್ರಿ, ಮಮತಾ, ಪುಷ್ಪಾ, ಉಷಾ, ಉಮೇಶ ಗೌಡ ಇತರರಿದ್ದರು.