ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಗಜಲ್ ಸಮ್ಮೇಳನದಲ್ಲಿ ರತ್ನಾ ಕೆ.ಭಟ್ ತಲಂಜೇರಿ ಅವರಿಗೆ ಮಿರ್ಜಾ ಗಾಲಿಬ್ ಪುರಸ್ಕಾರ ಪ್ರದಾನ ಮಾಡಲಾಯಿತು. ಕವಯತ್ರಿ ಸವಿತಾ ನಾಗಭೂಷಣ, ರಂಗಸ್ವಾಮಿ ಸಿದ್ದಯ್ಯ, ಎಸ್.ಪಿ.ದಿನೇಶ್, ಕಾಶಿನಾಥ ಅಂಬಲಗೆ, ಡಾ. ಹಸೀನಾ ಖಾದ್ರಿ ಇದ್ದರು.
- ಇಂದಿಗೂ ಜನಪ್ರಿಯತೆ ಉಳಿಸಿ ಕೊಂಡಿರುವ ಗಜಲ್
- ಕವಯತ್ರಿ ಸವಿತಾ ನಾಗಭೂಷಣ ಅಭಿಮತ
- ಸಹ್ರಾದ್ಯಿ ಕಾಲೇಜಿನಲ್ಲಿ ಮೂರನೇ ಸಮ್ಮೇಳನ
ಪ್ರೀತಿ, ಪ್ರೇಮ, ಮಾನವೀಯ ಸಂಬಂಧಗಳ ಅಂತಃಕರಣ ಗಜಲ್‌ನಲ್ಲಿ (jazal) ಮಿಳಿತವಾಗಿದೆ. ಇದೇ ಕಾರಣದಿಂದ ಗಜಲ್ ಇಂದಿಗೂ ಅತ್ಯಂತ ಆಪ್ತ ಎನಿಸುತ್ತದೆ. ತನ್ನ ಜನಪ್ರಿಯತೆ (popularity) ಉಳಿಸಿಕೊಂಡು ಬಂದಿದೆ ಎಂದು ಕವಯತ್ರಿ ಸವಿತಾ (savita) ನಾಗಭೂಷಣ ಹೇಳಿದರು.
ಕರ್ನಾಟಕ ಗಜಲ್ ಅಕಾಡೆಮಿಯಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಮೂರನೇ ಅಖಿಲ ಕರ್ನಾಟಕ ಗಜಲ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂದು ಜಾಗತಿಕವಾಗಿ ಶಾಂತಿ ಕದಡಿದೆ. ಎಲ್ಲೆಡೆಯೂ ಅಶಾಂತಿ, ದ್ವೇಷ ಹೆಚ್ಚುತ್ತಿದೆ. ಇಂತಹ ಕಾಲಘಟ್ಟದಲ್ಲಿ ಗಜಲ್‌ಗಳು ಎಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಲಾವಿದ ಸಿದ್ದರಾಮ ಹೊನ್ಕಲ್ ಮಾತನಾಡಿ, ಗಜಲ್‌ಗಳಲ್ಲಿ ಮನಸುಗಳಿಗೆ ಕನಸು ತುಂಬುವ ಶಕ್ತಿ ಇದೆ. ನೋವಿನ ಸಂದರ್ಭದಲ್ಲೂ ಗಜಲ್‌ಗಳು ಹೊಸ ಆಶಾಭಾವನೆ ಮೂಡಿಸುತ್ತವೆ. ಹೊಸ ಚೈತನ್ಯ ನೀಡುತ್ತದೆ. ಮನಸ್ಸು ಮುದಗೊಳ್ಳುತ್ತದೆ. ಇದೇ ಕಾರಣದಿಂದ ಶತಮಾನಗಳ ಹಿಂದಿನಿಂದಲೂ ಗಜಲ್ ಜನರ ನಡುವೆ ಹಾಸುಹೊಕ್ಕಾಗಿದೆ ಎಂದರು.
ನಮ್ಮ ನಡುವೆ ಅಸಂಖ್ಯಾತ ಕವಿಗಳಿದ್ದಾರೆ. ಇವರೆಲ್ಲರೂ ರಚಿಸಿದ 10 ಸಾವಿರಕ್ಕೂ ಹೆಚ್ಚು ಗಜಲ್ ಕೃತಿಗಳು ಪ್ರತಿ ವರ್ಷ ಮಾರಾಟ ಆಗುತ್ತಿವೆ. ಈ ಕಾಲಘಟ್ಟದಲ್ಲಿ ಕವಿಗಳ ಜವಾಬ್ದಾರಿಯೂ ಹೆಚ್ಚಬೇಕಿದೆ. ಗಜಲ್‌ಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಹೇಳಿದರು.
ಕವಿಗಳು ಆಯಾ ಕಾಲಘಟ್ಟದ ಸಾಕ್ಷಿಪ್ರಜ್ಞೆಗಳಂತೆ ಕೆಲಸ ಮಾಡಬೇಕು. ಬಹುತೇಕ ಸಂದರ್ಭದಲ್ಲಿ ಕವಿಗಳ ಕಾರಣದಿಂದಲೇ ಆಯಾ ಕಾಲದ ಅರಸರು ನೆನಪಾಗುತ್ತಾರೆ. ಕವಿಗಳೊಂದಿಗೆ ರಾಜರನ್ನು ನೆನಪಿಸಿಕೊಳ್ಳಲಾಗುತ್ತದೆ. ಕವಿಗಳ ಸಾಮರ್ಥ್ಯವೇ ಅಂತಹದ್ದು. ಕವಿಗಳು ಪ್ರೀತಿ, ಪ್ರೇಮ, ಅನುರಾಗದೊಂದಿಗೆ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕು. ವಾಸ್ತವಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ಪಿ.ದಿನೇಶ್, ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ನಿಕಟಪೂರ್ವ ಅಧ್ಯಕ್ಷ ಕಾಶಿನಾಥ ಅಂಬಲಗೆ, ಸಮ್ಮೇಳನದ ಸಂಚಾಲಕಿ ಡಾ. ಹಸೀನಾ ಖಾದ್ರಿ ಮತ್ತಿತರರು ಉಪಸ್ಥಿತರಿದ್ದರು.
ಪುರಸ್ಕಾರ ಪ್ರದಾನ
ಇದೇ ಮೊದಲ ಬಾರಿಗೆ ಕರ್ನಾಟಕ ಗಜಲ್ ಅಕಾಡೆಮಿಯಿಂದ ಮಿರ್ಜಾ ಗಾಲಿಬ್ ಪುರಸ್ಕಾರ ಪ್ರದಾನ ಮಾಡಲಾಯಿತು. ಮೊದಲ ಪುರಸ್ಕಾರವನ್ನು ರತ್ನಾ ಕೆ.ಭಟ್ ತಲಂಜೇರಿ ಅವರಿಗೆ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ರತ್ನಾ ಕೆ.ಭಟ್, ಗಜಲ್ ಶರಧಿಯಂತೆ, ಮೊಗೆದಷ್ಟೂ ಹೆಚ್ಚುತ್ತದೆ. ಗಜಲ್ ಅಕಾಡೆಮಿಯಿಂದ ನನ್ನನ್ನು ಗುರುತಿಸಿ ಗೌರವಿಸಿರುವುದು ಸಂತೋಷ ನೀಡಿದೆ ಎಂದು ಹೇಳಿದರು.
ಸಂವಿಧಾನದ ಬದಲು ರಾಜದಂಡ
ಯಾವ ಸಮಾಜ ಕವಿಗಳು, ಲೇಖಕರು, ವಿಜ್ಞಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುತ್ತದೋ ಅಂತಹ ಸಮಾಜ ಯುದ್ಧ ವಿರೋಧಿಯಾಗಿರುತ್ತದೆ ಹಾಗೂ ಸದಾ ಕಾಲ ಶಾಂತಿಯನ್ನೇ ಬಯಸುತ್ತದೆ. ಆದರೆ ಇಂದು ಸಂಸತ್‌ನಲ್ಲಿ ಸಂವಿಧಾನದ ಬದಲು ರಾಜದಂಡ ಸ್ಥಾನ ಪಡೆದುಕೊಂಡಿದೆ. ಧರ್ಮದ ನಶೆ ಹೆಚ್ಚುತ್ತಿರುವ ಪರಿಣಾಮವಾಗಿ ಯುವಜನರು ಕೋಮುವಾದದ ದಾರಿ ತುಳಿಯುವಂತಾಗಿದೆ. ಪ್ರಸ್ತುತ ಪ್ರಶ್ನಿಸುವವರನ್ನು ದೇಶದ್ರೋಹಿಗಳಂತೆ ಕಾಣಲಾಗುತ್ತಿದೆ. ಜೆನ್‌ಜೀ ಪೀಳಿಗೆ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡುತ್ತಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ಕಾಶಿನಾಥ ಅಂಬಲಗೆ ಹೇಳಿದರು.
ಇಂದಿನ ಸಂದರ್ಭದಲ್ಲಿ ಉತ್ತಮ ಅಭಿರುಚಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದರಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ತೀರಾ ಕಡಿಮೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವಷ್ಟು ಜನ ಸದಭಿರುಚಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಗಜಲ್ ಅಕಾಡೆಮಿಯಿಂದ ಡಿವಿಎಸ್‌ನಲ್ಲೂ ಗಜಲ್ ಕಾರ್ಯಕ್ರಮ ಆಯೋಜಿಸಲು ಅವಕಾಶ ಕಲ್ಪಿಸಲಾಗುವುದು.
— ಎಸ್.ಪಿ.ದಿನೇಶ್ ಡಿವಿಎಸ್ ಕಾರ್ಯದರ್ಶಿ