ಹೊಸನಗರದಲ್ಲಿ ಹಾದು ಹೋಗುವ ಶರಾವತಿ ನದಿ ನೀರು ತಳಹಿಡಿದಿರುವುದು.  
ಶಿವಮೊಗ್ಗ

ಮಲೆನಾಡ ನಡುಮನೆಯಲ್ಲೂ ಬರದ ಭೀತಿ

ಪ್ರಮುಖ ಮುಖ್ಯಾಂಶಗಳು

  • 61 ಗ್ರಾಮದ 3,768 ಕುಟುಂಬಗಳಿಗೆ ಉಂಟಾಗಲಿದೆ ಸಮಸ್ಯೆ
  • ಮಾರ್ಚ್​ ಅಂತ್ಯದ ವೇಳೆ ಕುಡಿಯುವ ನೀರಿನ ಕೊರತೆ
  • ಮಲೆನಾಡ ನಡುಮನೆಯಲ್ಲೂ ಬರದ ಭೀತಿ
ರವಿ ಬಿದನೂರು ಹೊಸನಗರ
ಉತ್ತಮ ಮಳೆಯಿಂದ ಜಲಾಶಯಗಳು ತುಂಬಿದ್ದರೂ ಕೂಡ ಹೊಸನಗರ ತಾಲೂಕಿನಲ್ಲಿ ಈ ವರ್ಷವೂ ಕುಡಿಯುವ ನೀರಿಗೆ ಬರ ಉಂಟಾಗಲಿದೆ.
ಈಗಾಗಲೇ ತಾಪಂ ಮಾಡಿರುವ ಸರ್ವೇ ಪ್ರಕಾರ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ 3,768 ಕುಟುಂಬಗಳಿಗೆ ಮಾರ್ಚ್​ ಅಂತ್ಯದ ವೇಳೆಗೆ ಕುಡಿಯುವ ನೀರಿಗೆ ಬರ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.
ರಿಪ್ಪನ್​ಪೇಟೆ, ಸುಳುಗೋಡು, ಪುರಪ್ಪೇಮನೆ, ಸೋನಲೆ, ಹೊಸೂರು, ಅಮೃತ, ಜೇನಿ, ಹರತಾಳು, ಯಡೂರು, ಅರಸಾಳು, ಚಿಕ್ಕಜೇನಿ, ಮುಂಬಾರು ತ್ರಿಣಿವೆ, ಹೆದ್ದಾರಿಪುರ ಬಾಳೂರು, ಕೋಡೂರು, ಮಾರುತಿಪುರ, ಕೆಂಚನಾಲ, ಖೈರಗುಂದ ಗ್ರಾಪಂಗಳ ಕೆಲವು ಭಾಗದಲ್ಲಿ ಕುಡಿಯುವ ನೀರಿಗೆ ಏಪ್ರಿಲ್​ ಮತ್ತು ಮೇನಲ್ಲಿ ಕೊರತೆಯಾಗಲಿದೆ.
ಕೊಳವೆಬಾವಿ ತೆರೆಯುವುದು ಅನಿವಾರ್ಯ
ಪುರಪ್ಪೇಮನೆ ಗ್ರಾಪಂನ ಹೆಬೈಲು ಗ್ರಾಮದ ಬಿಲ್ಪತ್ರೆಯ ಎರಡು ಸರ್ಕಾರಿ ಶಾಲೆಗಳು, ಎಂ.ಗುಡ್ಡೇಕೊಪ್ಪ ಗ್ರಾಪಂಯ ಅಂಬೇಡ್ಕರ್​ ಕಾಲನಿಯ 30 ಮನೆಗಳು, ಅಂಡಗದೋದೂರು ಗ್ರಾಪಂನ ನಿಡಿಕಾನ್​, ಕಾನಬೈಲು ಭಾಗದ 10 ಮನೆಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಎರಡು ದಿನಕ್ಕೊಮ್ಮೆ ಟ್ಯಾಂಕರ್​ ಮೂಲಕ ಕುಡಿಯುವ ನೀರು ಸರಬರಾಜಿನ ಅಗತ್ಯವಿದೆ. ಅಲ್ಲದೆ ತಾಲೂಕಿನ 20ಕ್ಕೂ ಹೆಚ್ಚು ಭಾಗದಲ್ಲಿ ತ್ವರಿತವಾಗಿ ಕೊಳವೆಬಾವಿ ತೆರೆಯಬೇಕಿರುವುದು ಅನಿವಾರ್ಯ.
1 ಕೋಟಿ ರೂ. ಅನುದಾನ
ಕುಡಿಯುವ ನೀರಿನ ಅಭಾವ ಎದುರಿಸಲು ಟಾಸ್ಕ್​ಪೋರ್ಸ್​ನಿಂದ 1 ಕೋಟಿ ರೂ. ಅನುದಾನ ನಿರೀಸಲಾಗಿದೆ. ಗ್ರಾಪಂಗಳಲ್ಲಿ 2025ನೇ ಸಾಲಿನ 15ನೇ ಹಣಕಾಸು ಜಮೆಗೆ ಕಾಯಲಾಗುತ್ತಿದೆ. ಉತ್ತಮ ಆದಾಯವಿರುವ ಗ್ರಾಪಂಗಳಲ್ಲಿ ಈಗಾಗಲೇ ಕುಡಿಯುವ ನೀರಿನ ನಿರ್ವಹಣೆ ಮಾಡಲಾಗುತ್ತಿದೆ. ಕಡಿಮೆ ಆದಾಯದ ಗ್ರಾಪಂಗಳ ನಿರ್ವಹಣೆಗೆ ಅನುದಾನದ ಅಗತ್ಯವಿದೆ.
286 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗ್ರಹಣ
ಬಹುಗ್ರಾಮಗಳಿಗೆ ಕುಡಿಯುವ ನೀರು ಹರಿಸುವ ಸಲುವಾಗಿ ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಚಾಲನೆಗೊಂಡ ಆರಂಭಿಕ 286 ಕೋಟಿ ರೂ. ವೆಚ್ಚದ ಚಕ್ರಾ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ಕಾಮಗಾರಿಗೆ ಗ್ರಹಣ ಹಿಡಿದಿದೆ. 955 ಕಿ.ಮೀ. ಉದ್ದದ ನೀರು ಹರಿಸುವ ಯೋಜನೆಯ ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ಜೂನ್​ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಶೇ.30ರಷ್ಟು ಪೈಪ್​ಲೈನ್​ ಕಾಮಗಾರಿ ಮಾತ್ರ ಈವರೆಗೆ ನಡೆದಿದೆ. ಅರಣ್ಯ ಸಮಸ್ಯೆ ಸೇರಿದಂತೆ ಕೆಲವೊಂದು ತಾಂತ್ರಿಕ ಅಡಚಣೆಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ಯೋಜನೆ ಕಾರ್ಯಗತಗೊಂಡಿದ್ದರೆ ಕುಡಿಯುವ ನೀರಿನ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಬಹುದೆಂಬ ನಿರೀೆ ಹುಸಿಯಾಗಿದ್ದು ವಿಳಂಬದಿಂದ ಇನ್ನೂ ಎರಡು ವರ್ಷ ಕಾಯಬೇಕಿದೆ.
ಸಾರಾ ಸಂಸ್ಥೆಯ ಕೆರೆ ಅಭಿವೃದ್ಧಿ
ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯು ಕೆರೆಗಳ ಪುನರುಜ್ಜೀವನ ಮೂಲಕ ನೀರಿನ ಅಭಾವಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಈ ಕಾರ್ಯವನ್ನು ಸಾರಾ ಸಂಸ್ಥೆ, ಎಸಿಐ ವರ್ಲ್ಡ್​ ವೈಡ್​, ಶೇಡಿನ ಕೆರೆ ಜೀಣೋರ್ದ್ಧಾರ ಸಮಿತಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಕೆರೆಗಳ ಜೀಣೋರ್ದ್ಧಾರ ನಡೆಸಲಾಗುತ್ತಿದೆ. ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿ ಗ್ರಾಮದ ಶೇಡಿನ ಕೆರೆ ಜೀಣೋರ್ದ್ಧಾರ ಕಾರ್ಯವು ನಿರಂತರವಾಗಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದು ಕಾಮಗಾರಿ ಮುಕ್ತಾಯದ ಹಂತ ತಲುಪುತ್ತಿದೆ. ಕೆರೆಯು ನಾಲ್ಕು ಎಕರೆ ವಿಸ್ತೀರ್ಣ ಹೊಂದಿದೆ. ಅಂದಾಜು ವೆಚ್ಚ 25 ಲ ರೂ.ಗಳಾಗಲಿದ್ದು 80 ರಿಂದ 100 ಎಕರೆ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ಇದರಿಂದ ಉಪಯೋಗವಾಗಲಿದೆ.
ಅಂತರ್ಜಲ ಹಿಡಿದಿಡುವ ಮೂಲಕ ನೀರಿನ ಬರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೇವಿಂದ್ರಪ್ಪ ಗೌಡ್ರು, ರವಿ, ಸುರೇಶ, ಉಮೇಶ, ಶೇಖರ, ಷಣ್ಮುಖ, ನಾಗಪ್ಪ, ಹಾಲೇಶ, ನವೀನ್​, ಗಣೇಶ್​, ಶಿವಕುಮಾರ್​, ಮಂಜು, ಶರಣಗೌಡ ಮತ್ತು ಸಾರ ಸಂಸ್ಥೆಯ ಧನುಷ್​ ಕುಮಾರ್​, ಕುಮಾರ್​, ಶಿವಕುಮಾರ್​, ಆದರ್ಶ, ಸಿಂಚನಾ ಕಾರ್ಯನಿರ್ವಹಿಸುತ್ತಿದ್ದಾರೆ.
ಹುಲಿಕಲ್​ ಭಾಗದಲ್ಲೂ ನೀರಿನ ಕೊರತೆ
ಅತೀ ಹೆಚ್ಚು ಮಳೆ ಬೀಳುವ ಹುಲಿಕಲ್​, ಕೊಡಚಾದ್ರಿ ಪರಿಸರದಲ್ಲೂ ಕೂಡ ಏಪ್ರಿಲ್​ನಲ್ಲಿ ನೀರಿನ ಬರ ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹೊಸೂರು (ಸಂಪೆಕಟ್ಟೆ ), ಖೈರಗುಂದ (ಮಾಸ್ತಿಕಟ್ಟೆ) ಗ್ರಾಪಂನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಅಭಾವ ಕುರಿತು ಮಾಹಿತಿ ಪಡೆಯಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ 2025 &26ನೇ ಸಾಲಿನ 15ನೇ ಹಣಕಾಸು ಜಮೆಗೆ ಕಾಯಲಾಗುತ್ತಿದೆ. ಹೆಚ್ಚು ಕಂದಾಯ ವಸೂಲಾತಿ ಇರುವ ಪಂಚಾಯಿತಿಗಳಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಕಡಿಮೆ ಕಂದಾಯ ಇರುವ ಪಂಚಾಯಿತಿಗಳಲ್ಲಿ ನಿರ್ವಹಣೆ ಕಷ್ಟವಾಗುತ್ತಿದೆ. ಈ ವರ್ಷದ ಅನುದಾನ ಲಭ್ಯವಾದರೆ ನಿರ್ವಹಣೆ ಸುಲಭವಾಗುವುದು. ಶ್ರೀ ಮಳೆಯಾದರೆ ಈ ಸಮಸ್ಯೆಗೆ ಪರಿಹಾರ ದೊರಕಬಹುದು.
> ನರೇಂದ್ರ ಕುಮಾರ್​, ತಾಪಂ ಇಒ ಹೊಸನಗರ