ಸಾಗರದ ಲೋಹಿಯಾ ನಗರದಲ್ಲಿ ಸೇವಾಸಾಗರ ಟ್ರಸ್ಟ್ ನಿರ್ಮಿಸಿರುವ 3 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಟ್ಟಡವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಗೋಪಾಲಕೃಷ್ಣ ಬೇಳೂರು, ಅ.ಪು.ನಾರಾಯಣಪ್ಪ, ಯು.ಎಚ್.ರಾಮಪ್ಪ ಇತರರಿದ್ದರು.
- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅನಿಸಿಕೆ
- ಸೇವಾಸಾಗರ ಟ್ರಸ್ಟ್ ಶೈಕ್ಷಣಿಕ ಕಟ್ಟಡ ಉದ್ಘಾಟನೆ
- ಮಕ್ಕಳಲ್ಲಿ ದೇಶ ಮೊದಲು ಭಾವನೆ ಇರಲಿ
ಸಾಗರ: ಮೌಲ್ಯಯುತ ಬದುಕು ರೂಪಿಸಿಕೊಳ್ಳಲು, ದೇಶದ ಭವ್ಯ ಪರಂಪರೆ ರಕ್ಷಿಸಲು ಹಾಗೂ ಗುರು ಹಿರಿಯರಿಗೆ ತರುವಂತೆ ಮಕ್ಕಳು ಶಿಕ್ಷಣ ಮುಂದುವರೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಲೋಹಿಯಾ ನಗರದಲ್ಲಿ ಸೇವಾ ಸಾಗರ ಟ್ರಸ್ಟ್‌ನಿಂದ ನಿರ್ಮಿಸಿರುವ 3 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ದೇಶ ಮೊದಲು ಎಂಬ ಭಾವನೆ ನಿರ್ಮಿಸುವ ಜತೆಗೆ ಧರ್ಮ, ಕರ್ಮ, ಯೋಗ, ಧ್ಯಾನ, ನೈತಿಕತೆಯ ಭದ್ರ ಬುನಾದಿಯನ್ನು ಶಿಕ್ಷಣದ ಮೂಲಕ ಹಾಕಿಕೊಡುವ ಕೆಲಸವನ್ನು ಸೇವಾಸಾಗರ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಶೈಕ್ಷಣಿಕ ಪದ್ಧತಿ ಬದಲಾವಣೆ ಚಿಂತನೆ ಅವಶ್ಯ
ಜಗತ್ತಿನಲ್ಲಿ ಹೆಚ್ಚು ಆತಂಕಗಳ ಸೃಷ್ಟಿಗೆ ಕಾರಣ ವಿದ್ಯಾವಂತರೇ ಎಂದು ಅಂಕಿ ಅಂಶ ಹೇಳುತ್ತದೆ. ಹಾಗಾದರೆ ನಮ್ಮ ಶೈಕ್ಷಣಿಕ ಪದ್ಧತಿಯನ್ನು ಯಾವ ರೀತಿ ಬದಲಾಯಿಸಿಕೊಳ್ಳಬೇಕು ಎನ್ನುವ ಕುರಿತು ಚಿಂತನೆ ಅಗತ್ಯ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಪಟ್ಟಾಭಿರಾಮ್ ಹೇಳಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಸೇವಾಸಾಗರ ಟ್ರಸ್ಟ್ ಬಹಳ ಹಿಂದೆಯೇ ಈ ಭಾಗದಲ್ಲಿ ಪರಿವಾರದ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ. ಇದು ಸಂಘದ ಶಾಲೆಯಲ್ಲ. ಬದಲಾಗಿ ಸರ್ಕಾರದ ಅನುದಾನದಲ್ಲಿ, ಸರ್ಕಾರದ ಕಾನೂನು ಚೌಕಟ್ಟಿಗೆ ಒಳಪಟ್ಟು, ಪರಿವಾರದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆಯಾಗಿದೆ ಎಂದರು.
ಸುಶಿಕ್ಷಿತ ಸಮಾಜ ನಿರ್ಮಾಣ, ವಿಕಸಿತ ಭಾರತದ ಪರಿಕಲ್ಪನೆ ಸಾಕಾರಕ್ಕೆ ಶಿಕ್ಷಣ ಅಗತ್ಯ. ಮಕ್ಕಳ ಶಿಕ್ಷಣಕ್ಕೆ ಪೂರಕ ಸಂಸ್ಥೆಗಳಿಗೆ ಅನುದಾನ ನೀಡುವುದು ಎಂದರೆ ಮಕ್ಕಳ ಭವಿಷ್ಯದ ಮೇಲೆ ಹೂಡಿಕೆ ಮಾಡಿದಂತೆ. ಅಂತಹ ಹೂಡಿಕೆಗಳು ಎಂದು ವೈಫಲ್ಯ ಅನುಭವಿಸುವುದಿಲ್ಲ. ಸೇವಾಸಾಗರ ಈ ಭಾಗದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಷ್ಟ್ರೀಯತೆ ಕಾರ್ಯ ಯಶಸ್ವಿಯಾಗಿ ನಡೆಸುತ್ತಿದೆ. ಇಂತಹ ಸಂಸ್ಥೆ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. ಸೇವೆಯ ಪರಿಕಲ್ಪನೆಯೊಂದಿಗೆ ಮುನ್ನಡೆಯುತ್ತಿರುವ ಸಂಸ್ಥೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಸೇವಾಸಾಗರ ವಿದ್ಯಾಸಂಸ್ಥೆ ಕಟ್ಟಡ ನಿರ್ಮಾಣಕ್ಕಾಗಿ 2 ಕೋಟಿ ರೂ. ಅನುದಾನ ನೀಡಿದ್ದರು. ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯ ಆಗಿರುತ್ತದೆ. ಸೇವಾಸಾಗರ ವಿದ್ಯಾಸಂಸ್ಥೆಯ ಬೆಳವಣಿಗೆಗೆ ಬೇಕಾದ ಅಗತ್ಯ ಸಹಕಾರ ನೀಡುತ್ತೇನೆ. ಇಂತಹ ಸಂಸ್ಥೆಗಳನ್ನು ಬೆಳೆಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ.
ಸೇವಾಸಾಗರ ಟ್ರಸ್ಟ್ ಅಧ್ಯಕ್ಷ ಅ.ಪು.ನಾರಾಯಣಪ್ಪ, ಸಂಸ್ಥಾಪಕ ಅಧ್ಯಕ್ಷ ಯು.ಎಚ್.ರಾಮಪ್ಪ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ, ಪ್ರಮುಖರಾದ ಪದ್ಮನಾಭ ಭಟ್, ನಾಗರಾಜ ಮಲ್ಲಾಡಿಹಳ್ಳಿ, ಸದಾನಂದ ಸ್ವಾಮಿ, ಗೀತಾ, ಶ್ಯಾಮ್‌ಸುಂದರ್, ಕೆ.ವಿ.ಪ್ರವೀಣ್, ವೆಂಕಟೇಶ್ ಇತರರಿದ್ದರು.