A city of ಸಾಗರ ತಾಲೂಕು ಹೊಸಗುಂದದ ಕೇರಳ ವಾಸ್ತುಶೈಲಿಯ ಕಂಚಿಕಾಳಮ್ಮ ದೇವಾಲಯ.disgraced temples
ಸಾಗರ ತಾಲೂಕು ಐತಿಹಾಸಿಕವಾಗಿ ಹಾಗೂ ಪ್ರವಾಸಿ ತಾಣಗಳ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಪ್ರದೇಶ. ಆದರೆ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿಯನ್ನೇ ಕಾಣದೆ ಸೊರಗಿ ಹೋಗಿದೆ.
ಕೆಳದಿ, ಇಕ್ಕೇರಿ, ಕಾನೂರು, ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನ, ಹೊಸಗುಂದದ ದೇವಾಲಯ ನಗರಿ, ಕೋಗಾರಿನ ಭೀಮೇಶ್ವರ, ನಾಡಕಲಸಿ ಹೀಗೆ ಭಾರೀ ಸಂಖ್ಯೆಯಲ್ಲಿ ಆಕರ್ಷಿತ ದೇವಾಲಯಗಳೇ ಇವೆ. ಇಂದಿಗೂ ಈ ದೇವಾಲಯಗಳಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಕೆಲವು ದೇವಾಲಯಗಳಂತೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಸ್ವಲ್ಪವೂ ಅಭಿವೃದ್ಧಿ ಕಂಡಿಲ್ಲ.
ವಿಶ್ವವಿಖ್ಯಾತ ಜೋಗ ಜಲಪಾತದ ಮೇಲ್ಭಾಗ ಕೊಂಚ ಉತ್ತರ ಕನ್ನಡ ಜಿಲ್ಲೆಗೂ ಸೇರುತ್ತದೆ. 180 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಈ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸರ್ವಋತುವಿನಲ್ಲಿಯೂ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಜಲಪಾತದ ಸುತ್ತಮುತ್ತ ಅಭಿವೃದ್ಧಿ ಕಾರ್ಯ ಆರಂಭಿಸಿದ್ದು, ಕೆಲಸ ಭರದಿಂದ ನಡೆದಿದೆ. ಉತ್ತಮ ಆಹಾರ ಮಳಿಗೆಗಳು, ದೇಸಿ ವಸ್ತು ಪ್ರದರ್ಶನಗಳ ಮಳಿಗೆ, ಏಕಕಾಲದಲ್ಲಿ ಸಾವಿರಾರು ಜನ ಒಂದೇ ಕಡೆ ನಿಂತು ಜೋಗಜಲಪಾತ ವೀಕ್ಷಿಸುವ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಂಡು 2026ರ ಮಾರ್ಚ್‌ಗೆ ಉದ್ಘಾಟನೆ ಮಾಡಬೇಕೆಂದು ಸಿದ್ಧತೆ ನಡೆಸಲಾಗುತ್ತಿದೆ.
ಕೆಳದಿ ಅರಸರ ಕಾಲಕ್ಕಿಂತಲೂ ಹಿಂದಿನ ಹೊಸಗುಂದದ ಅರಸರು ನಿರ್ಮಿಸಿದ, ಪಾಳುಬಿದ್ದಿದ್ದ ದೇವಾಲಯವನ್ನು ಮತ್ತೆ ಜೀವಕಳೆ ತುಂಬುವಂತೆ ಇಲ್ಲಿಯ ಉಮಾಮಹೇಶ್ವರ ಸೇವಾ ಟ್ರಸ್ಟ್ ಕಾರ್ಯ ನಿರ್ವಹಿಸಿದೆ. ಈ ಎಲ್ಲ ಕಾಯಕಕ್ಕೆ ಶೃಂಗೇರಿಯ ಶ್ರೀಮಠ ಮಾರ್ಗದರ್ಶನ ನೀಡುತ್ತಿದೆ. ಇಲ್ಲಿನ ವಾಸ್ತುಶಿಲ್ಪಗಳ ಜೀವಕಳೆ ಉಳಿಸಿಕೊಳ್ಳಲಾಗಿದೆ. ಪಾಳುಬಿದ್ದಿದ್ದ ಪುಷ್ಕರಿಣಿ ಈಗ ಕಾಯಕಲ್ಪ ಕಂಡಿದೆ. ಇದನ್ನು ವ್ಯವಸ್ಥಿತವಾಗಿ ಮುನ್ನಡೆಸುವಲ್ಲಿ ಸಿಎಂಎನ್ ಶಾಸೀ ಮತ್ತು ಗ್ರಾಮಸ್ಥರ ಪಾತ್ರ ಬಹುದೊಡ್ಡದು. ಸರ್ಕಾರ ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ್ದರೂ ಇಲ್ಲಿ ಯಾತ್ರಿ ನಿವಾಸ ನಿರ್ಮಾಣದ ತುರ್ತು ಅವಶ್ಯಕತೆ ಇದೆ. ಇಲ್ಲಿರುವ ಉಮಾಮಹೇಶ್ವರ ದೇವಾಲಯ, ಕಂಚಿ ಕಾಳಮ್ಮ, ಲಕ್ಷ್ಮೀ ಗಣಪತಿ, ಪ್ರಸನ್ನ ನಾರಾಯಣ ದೇವಾಲಯಗಳು ಮರ ಪ್ರತಿಷ್ಠಾಪನೆಗೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರತಿ ವರ್ಷ ಪ್ರವಾಸೋದ್ಯಮದ ದೃಷ್ಟಿಯಿಂದ ಲಕ್ಷದೀಪೋತ್ಸವ, ನವರಾತ್ರಿ ಉತ್ಸವ, ಹೊಸಗುಂದ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ.
ಪ್ರವಾಸಿಗರ ಆಕರ್ಷಿಸುವ ಸೇತುವೆ
ಕೇಂದ್ರ ಸರ್ಕಾರ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಕಳಸವಳ್ಳಿ- ಅಂಬಾರಗೋಡ್ಳು ಸೇತುವೆ ನಿರ್ಮಿಸಿದ ಮೇಲೆ ಸಿಗಂದೂರು ಒಳಗೊಂಡಂತೆ ಸಾಕಷ್ಟು ಪ್ರವಾಸಿ ಕ್ಷೇತ್ರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ವರದಹಳ್ಳಿಯ ಶ್ರೀಧರಾಶ್ರಮ, ಶರಾವತಿ ಹಿನ್ನೀರಿನ ಬಳೆ ಪದ್ಮಾವತಿ ದೇವಸ್ಥಾನ, ಹೊನ್ನೆಮರಡು ಸಾಹಸಿ ಕೇಂದ್ರ, ಕೋಗಾರಿನ ಭೀಮೇಶ್ವರ ಮುಂತಾದ ಪ್ರದೇಶಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಉತ್ತಮವಾದ ಹೋಟೆಲ್, ಯಾತ್ರಿ ನಿವಾಸಗಳು ನಿರ್ಮಾಣ ಆಗಬೇಕಿದೆ. ವರದಾ ನದಿಯ ಜನ್ಮಸ್ಥಳ ವರದಾಮೂಲ, ಶರಾವತಿ ಕಣಿವೆಯ ತಟದಲ್ಲಿ ಬರುವ ಸಾಕಷ್ಟು ಐತಿಹಾಸಿಕ ಪ್ರದೇಶಗಳನ್ನೂ ಒಳಗೊಂಡಂತೆ ಹೊನ್ನೆಮರಡು ಸಾಹಸಿ ಕೇಂದ್ರ ಎಲ್ಲವನ್ನೂ ನೋಡಲು ಪ್ರವಾಸಿಗರ ದಂಡು ಬರುತ್ತಲೇ ಇದೆ. ರಸ್ತೆಗಳ ಅಭಿವೃದ್ಧಿಯೂ ಆಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನೆಪದಲ್ಲಿ ಎಲ್ಲೆಂದರಲ್ಲಿ ತೋಡಿ ಹಾಗೆಯೇ ಬಿಟ್ಟಿದ್ದಾರೆ. ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ.
ಸಾಗರ ತಾಲೂಕಿನ ಮುಜರಾಯಿ ದೇವಾಲಯಗಳು ಒಳಗೊಂಡಂತೆ ಸಾಕಷ್ಟು ಐತಿಹಾಸಿಕ ದೇವಾಲಯಗಳಿವೆ. ಇಲ್ಲಿಗೂ ಪ್ರವಾಸಿಗರು ಬರುತ್ತಾರೆ. ಸಾಗರ ತಾಲೂಕಿನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 48 ದೇವಾಲಯಗಳಿವೆ. ಬಹುತೇಕ ದೇವಾಲಯಗಳ ನಿರ್ವಹಣೆಯನ್ನು ಅರ್ಚಕರೇ ಕಷ್ಟಪಟ್ಟು ನಡೆಸುತ್ತಿದ್ದಾರೆ. ಇನ್ನು ಕೆಲವು ದೇವಾಲಯಗಳು ಗ್ರಾಮಸ್ಥರ ಸಹಕಾರದಿಂದ ಮುನ್ನಡೆಯುತ್ತಿವೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಭಕ್ತರು ಬೇಸತ್ತಿದ್ದಾರೆ. 6 ದಶಕಗಳ ಹಿಂದೆ ಕೆಳದಿಯಲ್ಲಿ ಆರಂಭವಾದ ಪ್ರಾಚ್ಯವಸ್ತು ಸಂಗ್ರಹಾಲಯ ಈಗ ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣೆಗೆ ಒಳಪಟ್ಟಿದೆ. ಆದರೆ ಕಾಯಂ ಸಿಬ್ಬಂದಿ ವ್ಯವಸ್ಥೆ ಇಲ್ಲದೆ ಈಗ ಹಸ್ತಪ್ರತಿಗಳೆಲ್ಲ ಹಾಳಾಗುವ ಸ್ಥಿತಿ ತಲುಪಿದೆ.
ಬಹುದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿಯ ಪ್ರವಾಸಿ ಸ್ಥಳಗಳ ಮಾಹಿತಿಯೇ ಸಿಗುವುದಿಲ್ಲ. ತಾಲೂಕಿನ ಯಾವುದೇ ವೃತ್ತಗಳಲ್ಲಿ ಮಾರ್ಗಸೂಚಿಗಳಿಲ್ಲ. ಜನತೆ ಪರದಾಡುವ ಸ್ಥಿತಿ ಎದುರಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಮಾಹಿತಿ ಕೇಂದ್ರವನ್ನು ತುರ್ತಾಗಿ ತೆರೆಯಬೇಕಾದ ಅವಶ್ಯಕತೆ ಇದೆ. ಎಷ್ಟೋ ಐತಿಹಾಸಿಕ ದೇವಾಲಯಗಳು ನಿರ್ವಹಣೆ ಇಲ್ಲದೆ ಪಾಳುಬಿದ್ದು ಅನಾಥವಾಗಿವೆ. ಪ್ರವಾಸೋದ್ಯಮ ಇಲಾಖೆ ಪ್ರಮುಖ ಪ್ರದೇಶಗಳ ತೇಪೆ ಹಚ್ಚುವ ಕೆಲಸ ಮಾಡುತ್ತಿದೆಯೇ ಹೊರತು ಸಂಪೂರ್ಣ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಸಾಗರ ತಾಲೂಕಿನ 15 ಸ್ಥಳಗಳನ್ನು ಪ್ರಮುಖ ಪ್ರವಾಸಿ ತಾಣಗಳನ್ನಾಗಿ ಗುರುತಿಸಿದೆ. ಅವುಗಳನ್ನಾದರೂ ಅಭಿವೃದ್ಧಿ ಮಾಡುವಲ್ಲಿ ಇಚ್ಛಾಶಕ್ತಿ ಮೆರೆಯಬೇಕು.
ಮಲೆನಾಡಿನ ಸಾಗರ ತಾಲೂಕಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಆದರೆ ಆ ಎಲ್ಲ ಕೇಂದ್ರಗಳಿಗೆ ಮಾರ್ಗದರ್ಶನ ಮಾಡುವ ತಜ್ಞರು, ಮಾಹಿತಿ ನೀಡುವ ಮಾರ್ಗದರ್ಶಕರ ಅವಶ್ಯಕತೆ ಇದೆ. ಪ್ರಕೃತಿಯನ್ನು ಮಲಿನಗೊಳಿಸದೆ ಪ್ರವಾಸಿ ತಾಣಗಳನ್ನು ಸ್ವಚ್ಛತೆಯಿಂದ ಉಳಿಸಿಕೊಳ್ಳಬೇಕು.
ಸಾಹಸ ಸಮನ್ವಯ ಕೇಂದ್ರ, ಹೊನ್ನೇಮರಡು