ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಿಂದ ಡಿ.ಮಹಾದೇವಪ್ಪ ಅವರಿಗೆ ಪಿ.ಲಂಕೇಶ್ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರೊ. ರಾಜೇಂದ್ರ ಚೆನ್ನಿ, ಬಿ.ವೆಂಕಟ ಸಿಂಗ್, ಎನ್.ಮಂಜುನಾಥ್, ಯು.ಎಚ್.ವೈದ್ಯನಾಥ್, ನಾಗರಾಜ ನೇರಿಗೆ, ರಾಮಚಂದ್ರ ಗುಣಾರಿ, ಗೋಪಾಲ ಯಡಗೆರೆ, ತಿಮ್ಮಪ್ಪ, ಸಂತೋಷ್ ಕಾಚಿನಕಟ್ಟೆ, ಹೊನ್ನಾಳಿ ಚಂದ್ರಶೇಖರ್ ಇದ್ದರು.
- ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಕಳವಳ
- ಪ್ರೆಸ್ ಟ್ರಸ್ಟ್‌ನಿಂದ ಪಿ.ಲಂಕೇಶ್ ಪ್ರಶಸ್ತಿ ಪ್ರದಾನ
- ಬೆಂಗಳೂರಿನ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಪುರಸ್ಕಾರ
ಶಿವಮೊಗ್ಗ: ಭಾರತ (india) ದಲ್ಲಿ ಪ್ರಜಾಪ್ರಭುತ್ವ ಕುಸಿದು ಹೋಗಿದೆ. ಅನೇಕ ವರ್ಷಗಳಿಂದ ಪ್ರಜಾಪ್ರಭುತ್ವಕ್ಕೆ ಬೇಕಾದ ಗಟ್ಟಿ ಬುನಾದಿಯನ್ನು ಹಲವು ವರ್ಷಗಳಿಂದ ನಾವೇ ನಾಶ ಮಾಡಿದ್ದೇವೆ. ಪತ್ರಕರ್ತರಿಗೆ ಬರೆಯುವ ಸಾಮರ್ಥ್ಯವಿದೆ. ಆದರೆ ಅವರು ಬರೆಯಬಾರದು ಎಂಬ ಸ್ಥಿತಿಯನ್ನು ಸರ್ಕಾರಗಳು (governments) ಸೃಷ್ಟಿ ಮಾಡುತ್ತಿವೆ ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ (rajendra cehnni) ಕಳವಳ ವ್ಯಕ್ತಪಡಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ಮಂಗಳವಾರ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಪಿ.ಲಂಕೇಶ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅಭಿಪ್ರಾಯ ಹೇಳುವ ಅವಕಾಶ ಕಳೆದುಕೊಂಡಿದ್ದೇವೆ. ಇತ್ತೀಚೆಗೆ ಮತ ಚಲಾಯಿಸುವ ಹಕ್ಕನ್ನೂ ಕಳೆದುಕೊಳ್ಳುತ್ತಿದ್ದೇವೆ. ಪತ್ರಕರ್ತರ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾಹಿತಿ ಹಕ್ಕು ಬಳಸಿಕೊಂಡು ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಹಲವು ಪತ್ರಕರ್ತರನ್ನು ಕೊಲೆ ಮಾಡಲಾಗಿದೆ ಎಂದರು.
ಪ್ರಜಾ ಸಮುದಾಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಪ್ರಜೆಗಳಲ್ಲಿ ಈ ಮನಸ್ಥಿತಿ ಸೃಷ್ಟಿ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ಭಾರತದ ಪತ್ರಿಕೋದ್ಯಮಕ್ಕೆ ಶ್ರೇಷ್ಠ ಪರಂಪರೆಯಿದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಭಾರತದ ಸ್ವಾತಂತ್ರೃ ಹೋರಾಟಕ್ಕೆ ಶಕ್ತಿ ನೀಡಿದ ಮಹಾತ್ಮ ಗಾಂಧಿಯೂ ಪತ್ರಕರ್ತರಾಗಿದ್ದರು. ಅವರು ತಮ್ಮ ಪತ್ರಿಕೆಯಲ್ಲಿ ವಿರೋಧಿಗಳ ವಿಚಾರ ಮಂಡನೆಗೂ ಅವಕಾಶ ನೀಡುತ್ತಿದ್ದರು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿ ಬಗ್ಗೆ ಗಾಂಧೀಜಿ ಅವರಿಗೆ ಸಹಮತವಿರಲಿಲ್ಲ. ಗಾಂಧೀಜಿ ಅವರ ವಿಚಾರಗಳನ್ನು ಅಂಬೇಡ್ಕರ್ ಒಪ್ಪಲಿಲ್ಲ. ಆದರೆ ಅದು ದೊಡ್ಡ ಆರೋಗ್ಯಕರ ಸಂವಾದವಾಗಿತ್ತು. ಅಂಬೇಡ್ಕರ್ ಮೂಕನಾಯಕ ಪತ್ರಿಕೆ ಆರಂಭಿಸಿದ್ದರು. ಈ ಮೂಲಕ ದೊಡ್ಡ ವೈಚಾರಿಕ ಚಳವಳಿಗೆ ಚಾಲನೆ ನೀಡಿದ್ದರು ಎಂದರು.
ಪ್ರಭುತ್ವವು ಪತ್ರಿಕೋದ್ಯಮಕ್ಕೆ ಸದಾ ಹೆದರುತ್ತದೆ. ಪ್ರಭುತ್ವ ರಾಜತ್ವದ ಅಹಂಕಾರ ಪತ್ರಕರ್ತರ ಮುಂದೆ ನಡೆಯುವುದಿಲ್ಲ. ಏಕೆಂದರೆ ಪತ್ರಿಕೋದ್ಯಮಕ್ಕೆ ಅಷ್ಟೊಂದು ಶ್ರೇಷ್ಠ ಪರಂಪರೆಯಿದೆ. ಯುರೋಪ್‌ನಲ್ಲಿ ಮುದ್ರಣ ತಂತ್ರಜ್ಞಾನ ಆರಂಭವಾದ ಬಳಿಕ ಕ್ರಾಂತಿ ನಡೆದಿದೆ. ಜನರಿಗೆ ಮಾಹಿತಿ ನೀಡುವ ಜತೆಗೆ ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸುವ ಕೆಲಸವನ್ನು ಮಾಧ್ಯಮ ಮಾಡುತ್ತಿದೆ. ಅಧಿಕಾರದಲ್ಲಿ ಇದ್ದವರಿಗೆ ಸತ್ಯ ಹೇಳುವುದೇ ಪತ್ರಿಕೋದ್ಯಮ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು. ರಾಮಚಂದ್ರ ಗುಣಾರಿ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಲವು ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಆರಂಭಕ್ಕೂ ಮೊದಲು ವೇದಿಕೆಯಲ್ಲಿದ್ದ ಗಣ್ಯರು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ತನಿಖಾ ಪತ್ರಿಕೋದ್ಯಮಕ್ಕೆ ಆದ್ಯತೆ ಹೆಚ್ಚಲಿ
ಮಾಧ್ಯಮ ತನ್ನ ಸ್ವರೂಪ ಬದಲಿಸಿಕೊಂಡಿದೆ. ಮೂಲ ಸ್ವರೂಪದಿಂದ ವಿಮುಖವಾಗುತ್ತಿದೆ. ಈ ಕಾಲಘಟ್ಟದಲ್ಲಿ ಬದ್ಧತೆಯಿಂದ ಪತ್ರಿಕೋದ್ಯಮ ನಡೆಸಿದವರನ್ನು ಗುರುತಿಸಿರುವುದು ಶ್ಲಾಘನೀಯ ಎಂದು ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ ಸಿಂಗ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮ ಕಾಲಕ್ಕೆ ಅನುಗುಣವಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಬದಲಾದ ಸನ್ನಿವೇಶಕ್ಕೆ ಸರಿಯಾಗಿ ಪತ್ರಿಕೋದ್ಯಮ ಹಾಗೂ ಪತ್ರಕರ್ತ ಬದಲಾಗಲೇಬೇಕು. ಹೊಸ ತಂತ್ರಜ್ಞಾನ ಅಳವಡಿಕೆಗೆ ಬಂಡವಾಳ ಹೂಡಿಕೆ ಅನಿವಾರ್ಯ. ಹೀಗಾಗಿ ಓದುಗರು ಪತ್ರಿಕೆಗಳ ಕೈ ಹಿಡಿಯಬೇಕು. ಜಾಹೀರಾತನ್ನೇ ಅವಲಂಬಿಸಬೇಕಾದ ಸನ್ನಿವೇಶವಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣದ ಪೈಪೋಟಿ ಎದುರಿಸಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.