ಶಿಮುಲ್‌ನಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಆರ್.ಎಂ.ಮಂಜುನಾಥ ಗೌಡ ಉದ್ಘಾಟಿಸಿದರು. ವಿದ್ಯಾಧರ, ಚೇತನ್ ಎಸ್. ನಾಡಿಗೇರ್, ಸಿ.ಹನುಮಂತಪ್ಪ, ಡಿ.ಆನಂದ, ಕೆ.ಎಲ್.ಜಗದೀಶ್ವರ, ಎಸ್.ಕೆ.ಮರಿಯಪ್ಪ, ನಾಗಭೂಷಣ ಸಿ.ಕಲ್ಮನೆ ಇದ್ದರು. 
ಶಿವಮೊಗ್ಗ

ಶಿಮುಲ್‌ನಲ್ಲಿ ದಿನವೊಂದಕ್ಕೆ 9.50 ಲಕ್ಷ ಲೀ. ಹಾಲು ಸಂಗ್ರಹ I shimul milk

ಪ್ರಮುಖ ಮುಖ್ಯಾಂಶಗಳು

  • ಕೆಎಂಎಫ್ ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ ಮಾಹಿತಿ
  • ತರಬೇತಿ ಕಾರ್ಯಾಗಾರ ಉದ್ಘಾಟನೆ
ಶಿವಮೊಗ್ಗ: ಶುದ್ಧ ನೀರಿಗೆ ಗ್ಲಾಸ್‌ವೊಂದಕ್ಕೆ 100 ರೂ. ಕೊಡಲು ಸಿದ್ಧರಿರುವ ಮಂದಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದಾಗಲೂ ದುಡ್ಡು ಕೊಡುತ್ತಾರೆ. ಆದರೆ ಎಲ್ಲ ರೀತಿಯ ಪೌಷ್ಟಿಕಾಂಶ ಒದಗಿಸುವ ಹಾಲಿನ (milk) ಬೆಲೆ ಲೀಟರ್‌ಗೆ ಎರಡು ರೂ. ಹೆಚ್ಚಿಸಿದರೆ ಕೋಲಾಹಲವಾಗುತ್ತದೆ ಎಂದು ಎಂಎಡಿಬಿ ಅಧ್ಯಕ್ಷ, ಕೆಎಂಎಫ್ (kmf) ನಿರ್ದೇಶಕ ಆರ್.ಎಂ.ಮಂಜುನಾಥ ಗೌಡ (manjunatha gowda) ಬೇಸರ ವ್ಯಕ್ತಪಡಿಸಿದರು.
ಶಿಮುಲ್‌ನಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಹಾಗೂ ಕೃತಕ ಗರ್ಭಧಾರಣೆ ಮಾಡಿಸುವ ಕಾರ್ಯಕರ್ತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕು. ಈ ಮೂಲಕ ರೈತರ ಆರ್ಥಿಕ ಸ್ಥಿತಿ ಭದ್ರಗೊಳಿಸಬೇಕು ಎಂದು ಹೇಳಿದರು.
ಹಾಲಿಗೆ ಹೆಚ್ಚಿನ ದರ ಲಭಿಸಿದಾಗ ಮಾತ್ರ ರೈತರು ಹೈನುಗಾರಿಕೆಗೆ ಮನಸ್ಸು ಮಾಡುತ್ತಾರೆ. ಶಿಮುಲ್‌ಗೆ ದಿನವೊಂದಕ್ಕೆ 9.50 ಲಕ್ಷ ಲೀಟರ್ ಹಾಲು ಬರುತ್ತಿದೆ. ಉತ್ಪಾದಕ ಸಂಘಗಳು ಹಾಲು ಉತ್ಪಾದಕರಿಗೆ ವಾರ್ಷಿಕ 30ರಿಂದ 40 ಸಾವಿರ ರೂ. ಬೋನಸ್ ನೀಡುವಂತಾಗಬೇಕು ಎಂಬುದು ನನ್ನ ಕನಸಾಗಿದೆ ಎಂದು ತಿಳಿಸಿದರು.
ಸಹಕಾರಿ ತತ್ವ ಬೆಳೆಯಬೇಕಾದರೆ ರಾಜಕಾರಣ ಮಾಡಬಾರದು. ರಾಜಕಾರಣ, ಜಾತಿ ಹಾಗೂ ಲಿಂಗ ತಾರತಮ್ಯ ಬಿಟ್ಟರೆ ಮಾತ್ರ ಸಹಕಾರ ಕ್ಷೇತ್ರದ ಉನ್ನತಿ ಸಾಧ್ಯ. ಸಹಕಾರ ಸಂಘಗಳಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಅವಕಾಶ ಸಿಗುತ್ತವೆ ಎಂದು ಹೇಳಿದರು.
ಮಾಜಿ ಅಧ್ಯಕ್ಷರಾದ ಕೆ.ಎಲ್.ಜಗದೀಶ್ವರ, ಡಿ.ಆನಂದ, ಉಪಾಧ್ಯಕ್ಷ ಚೇತನ್ ಎಸ್. ನಾಡಿಗೇರ್, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಕಲ್ಮನೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕಿ ಎಸ್.ವೈ.ಪುಷ್ಪಾ, ಶಿಮುಲ್ ಎಂಡಿ ಡಾ. ಪಿ.ಆರ್.ಮಂಜೇಶ್ ಇತರರಿದ್ದರು.

ಐದು ಲಕ್ಷ ಲೀಟರ್ ಹೆಚ್ಚುವರಿ

ಪ್ರತಿ ದಿನ ಮಾರುಕಟ್ಟೆಗೆ 4.5 ಲಕ್ಷ ಲೀಟರ್ ಹಾಲು ಸಾಕಾಗುತ್ತದೆ. ಆದರೆ ಶಿಮುಲ್‌ಗೆ 9.50 ಲಕ್ಷ ಲೀಟರ್ ಹಾಲು ಬರುತ್ತಿದೆ. ಮಂಜುನಾಥ ಗೌಡರು ಕೆಎಂಎಫ್‌ನೊಂದಿಗೆ ನಡೆಸಿದ ಪ್ರಯತ್ನದ ಫಲವಾಗಿ 3.50 ಲಕ್ಷ ಲೀಟರ್ ಹಾಲು ಶಿಮುಲ್‌ನಿಂದ ಬೇರೆ ಜಿಲ್ಲೆಗಳಿಗೆ ರವಾನೆಯಾಗುತ್ತಿದೆ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾಹಿತಿ ನೀಡಿದರು. 2.5ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಗೆ ಬಳಸಲಾಗುತ್ತಿದೆ. ಶಿಮುಲ್‌ನಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳಿಗೆ 9 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ. ಹೈನುಗಾರ ಸದಸ್ಯರಿಗೆ ಅನೇಕ ಪ್ರಯೋಜನಗಳಿವೆ. ಆದರೆ ಕೆಲವರು ಅಪರೂಪಕ್ಕೆ ಶಿಮುಲ್‌ಗೆ ಹಾಲು ನೀಡಿ ಉಳಿದ ದಿನಗಳಲ್ಲಿ ಖಾಸಗಿಯವರಿಗೆ ಪೂರೈಕೆ ಮಾಡುತ್ತಿದ್ದಾರೆ. ಅಂತವರ ಷೇರು ಹಿಂದಿರುಗಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
"

ಅಗರದಳ್ಳಿ ಭಾಗದಲ್ಲಿ ಹಿಂದೆ ಕೇವಲ ಅಡಿಕೆ ತೋಟ ಮಾತ್ರ ಇತ್ತು. ರೈತರು ಹೈನುಗಾರಿಕೆ ಮಾಡುತ್ತಿರಲಿಲ್ಲ. ನಮ್ಮ ಸಂಘದಿಂದ ಪ್ರಾಯೋಗಿಕವಾಗಿ 20 ಹಸುಗಳಿಗೆ ಸಾಲ ನೀಡಲಾಯಿತು. ಈಗ ಆ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ನಡೆಯುತ್ತಿದೆ.

— ಸಿ.ಹನುಮಂತಪ್ಪ ಸಹಕಾರ ಯೂನಿಯನ್ ಅಧ್ಯಕ್ಷ