ಹೊಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದ ಹೋರಿಗಳು.
ಹೊಳೆಹೊನ್ನೂರು: ಹೋರಿಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ದುಬಾರಿ ಬೆಲೆಯ ಎತ್ತುಗಳನ್ನು ಹೊಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ಗೋಶಾಲೆಗೆ ಸಾಗಿಸಲಾಗಿದೆ.
ಅರಸೀಕೆರೆ ತಾಲೂಕಿನ ಗೆಣಸಿ ಎತ್ತುಗಳ ಸಂತೆಯಲ್ಲಿ ಖರೀದಿಸಿದ ಹೋರಿಗಳನ್ನು ಚಿತ್ರದುರ್ಗ-ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹಾವೇರಿಯ ತುಮ್ಮಿನಕಟ್ಟೆಗೆ ಸಾಗಿಸಲಾಗುತ್ತಿತ್ತು. ಚನ್ನಗಿರಿಯಿಂದ ಬಜರಂಗ ದಳದ ಕಾರ್ಯಕರ್ತರು ಎತ್ತುಗಳು ತುಂಬಿದ ಲಾರಿಯಲ್ಲಿ ಹಿಂಬಾಲಿಸಿಕೊಂಡು ಬಂದು ಹೊಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಳೆಹೊನ್ನೂರು ಹೊಸ ಹೆದ್ದಾರಿಯಲ್ಲಿ ಎತ್ತುಗಳು ತುಂಬಿದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಎಲ್ಲ ಎತ್ತುಗಳನ್ನು ಶಿವಮೊಗ್ಗದ ಗೋಶಾಲೆಗೆ ಬಿಟ್ಟಿದ್ದಾರೆ. ಹೋರಿಗಳನ್ನು ತಂದವರು ಸಂತೆಗಳಲ್ಲಿ ಎತ್ತುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಎನ್ನಲಾಗುತ್ತಿದೆ.
ಹಾವೇರಿ ಜಿಲ್ಲೆಯ ಕಿರಿಗೇರಿ ಹಾಗೂ ಭದ್ರಾವತಿ ಮೂಲದ ಎಮ್ಮೆಹಟ್ಟಿ ರೈತರು ವ್ಯವಸಾಯಕ್ಕೆಂದು 9 ಜೊತೆ ಎತ್ತುಗಳನ್ನು ಅರಸೀಕೆರೆಯ ಗೆಣಸಿ ಸಂತೆಯಲ್ಲಿ ಖರೀದಿಸಿದ್ದಾರೆ. ಪ್ರತ್ಯೇಕವಾಗಿ ಲಾರಿ ಬಾಡಿಗೆ ಮಾಡಿದರೆ ಸಾಗಣೆ ವೆಚ್ಚ ಹೆಚ್ಚಾಗುತ್ತದೆ ಎಂದು ಲಾರಿಯೊಂದನ್ನು 10 ಸಾವಿರ ರೂ.ಗೆ ಬಾಡಿಗೆ ತೆಗೆದುಕೊಂಡು ಊರಿನತ್ತ ಹೋರಟಿದ್ದಾರೆ.
ಹೊಳೆಹೊನ್ನೂರಿನ ಠಾಣೆ ಎದುರು ಬಂದ ರೈತರು ಪೊಲೀಸರಿಗೆ ಹಾಗೂ ಬಜರಂಗದಳದ ಯುವಕರಿಗೆ ಪರಿಪರಿಯಾಗಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಅಂದಾಜು 10 ಲಕ್ಷ ರೂ. ಮೌಲ್ಯದ ಹೋರಿಗಳನ್ನು ಶಿವಮೊಗ್ಗದ ಮಹಾವೀರ ಗೋಶಾಲೆಗೆ ಸಾಗಿಸಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ರೈತ ಸಂಘಟನೆಯ ಸಹಕಾರದೊಂದಿಗೆ ಹಾವೇರಿ ಹಾಗೂ ಭದ್ರಾವತಿ ಮೂಲದ ರೈತರು ಶಿವಮೊಗ್ಗ ಉಪ ವಿಭಾಗಾಧಿಕಾರಿ ಕಚೇರಿ ಎದುರು ಎತ್ತುಗಳನ್ನು ಬಿಟ್ಟು ಕಳಿಸುವಂತೆ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ರೈತರೊಂದಿಗೆ ಮಾತು ಮಾತುಕತೆ ನಡೆಸಿದ ಉಪವಿಭಾಗಾಧಿಕಾರಿ ಸದ್ಯಕ್ಕೆ ಎತ್ತುಗಳನ್ನು ವಾಪಸ್ ಬಿಡಲು ಆಸ್ಪದವಿಲ್ಲ ಎಂದು ಸ್ಥಳದಿಂದ ತೆರಳಿದ್ದಾರೆ.