ತೀರ್ಥಹಳ್ಳಿ ತಾಲೂಕಿನ ಹೊಸೂರು ಮಾನಪ್ಪ ಗೌಡ ಎಂಬುವರ ಮನೆ ಮೇಲೆ ಮರ ಬಿದ್ದಿರುವುದು.
ತೀರ್ಥಹಳ್ಳಿ: ತಾಲೂಕಿನಲ್ಲಿ ಪುನರ್ವಸು ಮಳೆ ಬಿರುಸಾಗಿದೆ. ಗಾಳಿ ಮಳೆಯಿಂದ ಮನೆಗಳ ಮೇಲೆ ಮರಗಳು ಬೀಳುತ್ತಿವೆ. ಆಗುಂಬೆ ಭಾಗದಲ್ಲಿ ಅಡಕೆ ತೋಟಗಳಿಗೂ ಹಾನಿಯಾಗಿದೆ. ಮಂಗಳವಾರ ಇಡೀ ದಿನ ಗಾಳಿ ಸಹಿತ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ವಿದ್ಯುತ್ ಕಂಬಗಳು ನೆಲಕಚ್ಚಿರುವುದರಿಂದ ಮೂರ‌್ನಾಲ್ಕು ದಿನಗಳಿಂದ ಗ್ರಾಮೀಣ ಭಾಗದ ಜನರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಮೊಬೈಲ್ ಚಾರ್ಜ್ ಮಾಡಿಕೊಳ್ಳುವಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ನಾಲೂರು, ಆಗುಂಬೆ, ಬಿದಿರಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಅಡಕೆ ಮರಗಳು ಮರಗಳು ಮುರಿದುಬೀಳುತ್ತಿವೆ.
ವಿದ್ಯುತ್ ಕಂಬಗಳು ಬಿದ್ದುದರಿಂದ ನೊಣಬೂರು, ಮಲ್ಲೇಸರ, ಆರಗ ಗ್ರಾಪಂನ ಕೆಲವು ಭಾಗಗಳು, ಆಗುಂಬೆ ಹೋಬಳಿಯ ಮೇಗರವಳ್ಳಿ, ನಾಲೂರು, ಆಗುಂಬೆ, ಬಿದಿರಗೋಡು ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಮೂರ‌್ನಾಲ್ಕು ದಿನಗಳಿಂದ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ದುರಸ್ತಿ ಕಾರ್ಯಕ್ಕೂ ಅಡಚಣೆಯಾಗುತ್ತಿದೆ ಎಂದು ಮೆಸ್ಕಾಂ ಎಇಇ ಪ್ರಶಾಂತ್ ತಿಳಿಸಿದರು.
ಆಗುಂಬೆ ಹೋಬಳಿ ಕೆಸಲೂರು ಗ್ರಾಮದ ಕಡ್ತೂರು ಗ್ರಾಮದಲ್ಲಿ ಮರ ಬಿದ್ದು ಕಮಲಮ್ಮ ಎಂಬುವರ ಮನೆಯ ಗೋಡೆಗೆ ಹಾನಿಯಾಗಿದೆ. ಹೊಳಲೂರು ಬೆಟಗೇರಿಯ ವಿಜಯ ಎಂಬುವರ ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಹೊಸೂರು ಮಾನಪ್ಪ ಗೌಡ ಅವರ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಮತ್ತು ಕೊಟ್ಟಿಗೆಯ ಮಾಡು ಕುಸಿದಿದೆ.