- ಶಿವಮೊಗ್ಗದಿಂದ ಅಹಮದಾಬಾದ್‌ಗೆ 350 ಅಡಿಕೆ ಚೀಲ ಲೋಡ್ ಮಾಡಲಾಗಿತ್ತು
- ಚಾಲಕನ ಮೊಬೈಲ್ ಸ್ವಿಚ್ ಆಫ್, ಲಾರಿ ಜಿಪಿಎಸ್ ಸಂಪರ್ಕ ಕಡಿತ
- ವಿನೋಬನಗರ ಠಾಣೆಗೆ ದೂರು ನೀಡಿದ ಲಾರಿ ಮಾಲೀಕ
ಶಿವಮೊಗ್ಗ: ನಗರದ ಎಪಿಎಂಸಿ ಯಾರ್ಡ್‌ನಿಂದ ಗುಜರಾತ್‌ನ ಅಹಮದಾಬಾದ್‌ಗೆ 77.17 ಲಕ್ಷ ರೂ. ಮೌಲ್ಯದ ಅಡಿಕೆ ಕೊಂಡೊಯ್ದ ಲಾರಿ ನಾಪತ್ತೆ(lorry missing)ಯಾಗಿದೆ. ಮಾರ್ಗಮಧ್ಯೆ
ಚಾಲಕನ ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ಲಾರಿಯ ಜಿಪಿಎಸ್ ಸಂಪರ್ಕ ಕೂಡ ಕಡಿತಗೊಂಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಆ.7ರಂದು ಶಿವಮೊಗ್ಗದ ಎಪಿಎಂಸಿ ಮಂಡಿಯಿಂದ 77,17,500 ರೂ. ಮೌಲ್ಯದ 24.50 ಟನ್ ತೂಕದ 350 ಅಡಿಕೆ ಚೀಲಗಳನ್ನು ಲಾರಿಗೆ ಲೋಡ್ ಮಾಡಲಾಗಿತ್ತು. ಚಾಲಕ ಅಲ್ಲಾಭಕ್ಷಿ ಎಂಬಾತ ಲಾರಿಯನ್ನು ಶಿವಮೊಗ್ಗದಿಂದ ಗುಜರಾತ್ ರಾಜ್ಯದ ಅಹಮದಾಬಾದ್‌ಗೆ ಕೊಂಡೊಯ್ದಿದ್ದ. ಈ ವೇಳೆ ಚಾಲಕನ ಮೊಬೈಲ್ ಸ್ವಿಚ್ ಆಫ್(Mobile switched off) ಆಗಿದ್ದು, ಲಾರಿಯ ಜಿಪಿಎಸ್ ಸಂಪರ್ಕ ಕಡಿತವಾಗಿದೆ ಎಂದು ದೂರಲಾಗಿದೆ.
ಘಟನೆ ಸಂಬಂಧ ಲಾರಿ ಮಾಲೀಕ 77,17,500 ರೂ. ಅಡಿಕೆ, 21 ಲಕ್ಷ ರೂ. ಮೌಲ್ಯದ ಲಾರಿ ಸೇರಿ ಒಟ್ಟು 98.17 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೆ ಚಾಲಕ ಸಂಪರ್ಕಕ್ಕೆ ಕಾದಿದ್ದ ಲಾರಿ ಮಾಲೀಕರು ತಡವಾಗಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.