ಸಂಕೇತ್ ಶವದ ಎದುರು ಕುಟುಂಬದವರ ಆಕ್ರಂದನ.
- ಮೃತ ವಿದ್ಯಾರ್ಥಿಯ ಅಂತ್ಯಕ್ರಿಯೆ
- ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಣೆ
ಶಿವಮೊಗ್ಗ: ನಗರದ ಊರಗಡೂರಿನಲ್ಲಿ ಸೋಮವಾರ (monday) ರಾತ್ರಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ (student) ಸಂಕೇತ್(16) ಹತ್ಯೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ (relief) ಘೋಷಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳೆಲ್ಲರೂ ಅಪ್ರಾಪ್ತರು. ಇವರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಸಂಕೇತ್‌ಗೆ ಚಿರಪರಿಚಿತರೇ ಆಗಿದ್ದಾರೆ. ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಕಿರಿಕ್ ಸಂಕೇತ್ ಹತ್ಯೆಯಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಊರಗಡೂರಿನಲ್ಲಿ ಶೋಕ ಮಡುಗಟ್ಟಿದೆ. ಹಿಂದು-ಮುಸ್ಲಿಂ ಸಮುದಾಯದ ಪ್ರಮುಖರೆಲ್ಲರೂ ಮೃತ ಬಾಲಕನ ಕುಟುಂಬದ ಶೋಕದಲ್ಲಿ ಭಾಗಿಯಾಗಿದ್ದಾರೆ.
ಸಂಕೇತ್ ಜತೆಗೆ ಆರೋಪಿಗಳು ಎರಡು ದಿನಗಳ ಹಿಂದೆಯೇ ಕ್ರಿಕೆಟ್ ಪಂದ್ಯದ ವಿಚಾರವಾಗಿ ಜಗಳವಾಡಿದ್ದರು. ಘಟನೆಯ ದಿನ ಆರೋಪಿಗಳೆಲ್ಲರೂ ಮತ್ತೋರ್ವ ಬಾಲಕ (ಆತ ಸಂಕೇತ್ ಗೆಳೆಯನೂ ಹೌದು)ನೊಂದಿಗೆ ಜಗಳವಾಡುತ್ತಿದ್ದರು. ಸಂಕೇತ್ ಜಗಳ ಬಿಡಿಸಲು ಹೋದಾಗ ಆತನ ಮೇಲೆ ಆರೋಪಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂಬುದನ್ನು ಎಸ್ಪಿ ಬಿ.ನಿಖಿಲ್ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳು ಯಾವುದೇ ಆಯುಧ ಬಳಸಿಲ್ಲ. ಕೈನಿಂದಲೇ ಗುದ್ದಿದ್ದಾರೆ. ಹೊಡೆತದ ತೀವ್ರತೆಗೆ ಸಂಕೇತ್ ಮೃತಪಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ರಾತ್ರಿಯೇ ಸಂಕೇತ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮಂಗಳವಾರ ಊರಗಡೂರಿನ ಬಾಲಕನ ಮನೆಗೆ ತರುವ ವೇಳೆಗೆ ಅಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ನೆರೆಹೊರೆಯವರೂ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದರು. ಆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಘಟನೆ ಖಂಡಿಸಿ ಕೆಲ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿದೆ. ಮಕ್ಕಳು ದೊಡ್ಡವರ ಮಾತು ಕೇಳುತ್ತಿಲ್ಲ. ಹೀಗಾಗಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಣೆಗೆ ಕಡಿವಾಣ ಹಾಕಬೇಕು. ಯಾವ ಕಾರಣಕ್ಕೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಭೇಟಿ ನೀಡಿದ ಪ್ರಮುಖರು
ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಆಯನೂರು ಮಂಜುನಾಥ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮುಂತಾದವರು ಮೃತ ಬಾಲಕನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಎಸ್ಪಿ ಬಿ.ನಿಖಿಲ್, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್.ಹೇಮಂತ್ ಕೂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.
15 ಲಕ್ಷ ರೂ. ಪರಿಹಾರ
ಸಂಕೇತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕೇತ್ ಪಾಲಕರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು. 15 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ಹಾಗೂ ಶಿಕ್ಷಣ ಇಲಾಖೆಯಿಂದ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದಿದ್ದಾರೆ.
ಗಾಂಜಾ ಪರೀಕ್ಷೆ?
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆರೋಪಿ ಸ್ಥಾನದಲ್ಲಿರುವ ಅಪ್ರಾಪ್ತರು ಗಾಂಜಾ ಸೇವನೆ ಮಾಡಿದ್ದರೇ? ಎಂಬುದರ ಪತ್ತೆಗೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದೆ. ಒಂದು ವೇಳೆ ಮಾದಕ ವಸ್ತು ಬಳಕೆ ಮಾಡಿರುವುದು ದೃಢಪಟ್ಟರೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆಯಲಿದೆ.