ನೇಪಾಳ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 54 ಪ್ರವಾಸಿಗರ ತಂಡ. 
ಶಿವಮೊಗ್ಗ

ನೇಪಾಳ ಪ್ರವಾಸಕ್ಕೆ ತೆರಳಿದ್ದ 54 ಮಂದಿ ಸೇಫ್

ಹೊಸನಗರ: ನೇಪಾಳ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ 54 ಜನರು ಸುರಕ್ಷಿತವಾಗಿದ್ದು, ಪ್ರವಾಸ ಮೊಟಕುಗೊಳಿಸಿ ವಾಪಸಾಗುತ್ತಿದ್ದಾರೆ.
ಶ್ರೀ ಗುರುಶಾಂತ ವೀರೇಶ್ವರ ಟೂರ್ಸ್‌ನಲ್ಲಿ ಆ.23ರಿಂದ ಏಳು ದಿನ ಪ್ರವಾಸಕ್ಕೆ ತೆರಳಿದ್ದರು. ನೇಪಾಳದ ದಕ್ಷಿಣ ಭಾಗದ ಪ್ರವಾಸ ಮುಗಿಸಿ ಕಠ್ಮಂಡುಗೆ ಹೊರಟಿದ್ದರು. ನೇಪಾಳದಲ್ಲಿ ಪ್ರವಾಹ ಉಂಟಾದ ಕಾರಣ ಸರ್ಕಾರ ಪ್ರವಾಸ ಮಾಡದಂತೆ ಸೂಚಿಸಿ ವಾಪಸ್ ಬರುವಂತೆ ಕ್ರಮ ಕೈಗೊಂಡಿದೆ. ಪ್ರವಾಸದಲ್ಲಿದ್ದ ರಾಜ್ಯದ ವಿವಿಧ ಭಾಗದ 54 ಜನರು ಸುರಕ್ಷಿತವಾಗಿ ಮರಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ 6 ಜನರು ಸುರಕ್ಷಿತವಾಗಿದ್ದು, ನೇಪಾಳ ಪ್ರವಾಸ ತಂಡದಲ್ಲಿ ಹೊಸನಗರದ ವಕೀಲ ಕೆ.ಬಿ.ಪ್ರಶಾಂತ್, ಜ್ಯೋತಿ, ಶಿವಮೊಗ್ಗದ ರವಿ, ಹರೀಶ್, ಭದ್ರಾವತಿಯ ಮಂಜುನಾಥ್, ಕಾಂತರಾಜ್ ಇದ್ದರು.
ವಕೀಲ ಕೆ.ಬಿ.ಪ್ರಶಾಂತ್ ಪ್ರತಿಕ್ರಿಯಿಸಿ, ನೇಪಾಳದ ದಕ್ಷಿಣ ಭಾಗದ ಪ್ರವಾಸ ಬಹುತೇಕ ಮುಗಿಸಿ ಕಠ್ಮಂಡು ತೆರಳಬೇಕಿತ್ತು. ಸರ್ಕಾರ ಪ್ರವಾಹದ ಎಚ್ಚರಿಕೆ ಕೊಟ್ಟು ವಾಪಸ್ ಆಗುವಂತೆ ಸೂಚಿಸಿದೆ. ಸುರಕ್ಷಿತವಾಗಿ ಬರುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.